ಹಿಂದಿ ಹೃದಯಭೂಮಿಯ ರಾಜಕೀಯದಲ್ಲಿ ತನ್ನದೇ ಛಾಪು ಮೂಡಿಸಿದ್ದ ಚಾಣಾಕ್ಷ ಮುಲಾಯಂ ಸಿಂಗ್ ಯಾದವ್

ಐದು ದಶಕಗಳಿಂದ ಹಿಂದಿ ಹೃದಯಭೂಮಿಯ ರಾಜಕೀಯದ ಮೇಲೆ ಅಗಾಧವಾದ ನೆರಳು ಹೊಂದಿದ್ದ ಮುಲಾಯಂ ಸಿಂಗ್ ಯಾದವ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 
ಮುಲಾಯಂ ಸಿಂಗ್ ಯಾದವ್
ಮುಲಾಯಂ ಸಿಂಗ್ ಯಾದವ್

ಲಖ್ನೊ: ಐದು ದಶಕಗಳಿಂದ ಹಿಂದಿ ಹೃದಯಭೂಮಿಯ ರಾಜಕೀಯದ ಮೇಲೆ ಅಗಾಧವಾದ ನೆರಳು ಹೊಂದಿದ್ದ ಮುಲಾಯಂ ಸಿಂಗ್ ಯಾದವ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಗುರುಗ್ರಾಮ್ ನ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಹಿರಿಯ ಸಮಾಜವಾದಿ ನಾಯಕ ಇಂದು ಬದುಕಿರುತ್ತಿದ್ದರೆ ಮುಂದಿನ ನವೆಂಬರ್ 22 ರಂದು 83 ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಅವರು ಇಬ್ಬರು ಪುತ್ರರನ್ನು ಮತ್ತು ದೇಶದ ದೊಡ್ಡ ರಾಜಕೀಯ ಕುಟುಂಬವನ್ನು ಅಗಲಿದ್ದಾರೆ. 

ಮುಲಾಯಂ ಯಾದವ್ ಅವರು 10 ಬಾರಿ ಶಾಸಕರಾಗಿ ಮತ್ತು ಏಳು ಬಾರಿ ಸಂಸದರಾಗಿ ಮೂರು ಬಾರಿ ಉತ್ತರ ಪ್ರದೇಶದ ಸಿಎಂ ಆಗಿ ಸೇವೆ ಸಲ್ಲಿಸಿದವರು. ಮುಲಾಯಂ ಅವರು ಯುನೈಟೆಡ್ ಫ್ರಂಟ್ ಸರ್ಕಾರದ ಭಾಗವಾಗಿ 1996 ಮತ್ತು 1998 ರ ನಡುವೆ ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ಪುತ್ರ ಅಖಿಲೇಶ್ ಯಾದವ್ ಕೂಡ ಒಮ್ಮೆ (2012-2017) ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ 5 ವರ್ಷ ಆಡಳಿತ ನಡೆಸಿದ್ದಾರೆ. 

ಆರಂಭದಲ್ಲಿ ಕುಸ್ತಿಪಟು, ಶಿಕ್ಷಕ: ಮುಲಾಯಂ ಅವರು ತನ್ನ ಆರಂಭಿಕ ಜೀವನದಲ್ಲಿ ಕುಸ್ತಿಪಟು ಮತ್ತು ಶಿಕ್ಷಕರಾಗಿದ್ದವರು. ಮುಲಾಯಂ ರಾಜಕೀಯ ಪ್ರವೇಶವು ಕುಸ್ತಿ ಪಂದ್ಯದಲ್ಲಿ ಮೂಲವನ್ನು ಹೊಂದಿತ್ತು. ಆಗ 28 ವರ್ಷ ವಯಸ್ಸಿನ ಮುಲಾಯಂ ಅವರು ಮೈನ್‌ಪುರಿಯಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸುತ್ತಿದ್ದರು. ಕುಸ್ತಿಪಟುವಾಗಿ ತಮ್ಮ ಕೌಶಲ್ಯದಿಂದ ಮೈನ್‌ಪುರಿಯ ಜಸ್ವಂತ್‌ನಗರದ ಆಗಿನ ಶಾಸಕ ನಾಥು ಸಿಂಗ್ ಅವರನ್ನು ಮೆಚ್ಚಿಸಿದರು.

ನಾಥು ಸಿಂಗ್ ಅವರು ಮುಲಾಯಂ ಅವರನ್ನು ರಾಜಕೀಯದಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ಕರೆತಂದರು. ಅಷ್ಟೇ ಅಲ್ಲದೆ ತಮ್ಮ ಕ್ಷೇತ್ರದಲ್ಲಿಯೇ ಅಭ್ಯರ್ಥಿಯಾಗಿ ಅವರನ್ನು ಕಣಕ್ಕಿಳಿಸಿದರು. ಸಂಯುಕ್ತ ಸಮಾಜವಾದಿ ಪಕ್ಷದ ಟಿಕೆಟ್‌ನಲ್ಲಿ ಜಸ್ವಂತ್‌ನಗರ ವಿಧಾನಸಭಾ ಸ್ಥಾನ ಗೆದ್ದ ಮುಲಾಯಂ ಗೆದ್ದರು. ನಾಥು ಸಿಂಗ್ ಬೇರೆ ಕ್ಷೇತ್ರದಲ್ಲಿ ಹೋಗಿ ನಂತರ ಸ್ಪರ್ಧಿಸಿದ್ದರು. 

1967 ರಿಂದ, ರಾಜಕೀಯದಲ್ಲಿ ಮುಲಾಯಂ ಹಿಂತಿರುಗಿ ನೋಡಲಿಲ್ಲ. 1993 ರವರೆಗೆ ಆರು ಬಾರಿ ಜಸ್ವಂತನಗರ ವಿಧಾನಸಭಾ ಸ್ಥಾನವನ್ನು ಗೆದ್ದರು, ಪ್ರತಿ ಬಾರಿಯೂ ವಿವಿಧ ಪಕ್ಷಗಳನ್ನು ಪ್ರತಿನಿಧಿಸಿದರು -- 1974 (ಭಾರತೀಯ ಕಿಸಾನ್ ದಳ), 1977 (ಭಾರತೀಯ ಲೋಕದಳ), 1985 (ಚರಣ್ ಸಿಂಗ್ ಅವರ ಲೋಕದಳ ), 1989 (ಜನತಾ ದಳ), 1991 (ಸಮಾಜವಾದಿ ಜನತಾ ಪಕ್ಷ), 1993 (ಸಮಾಜವಾದಿ ಪಕ್ಷ).

1996ರಲ್ಲಿ, ಅವರು ಸಹಸ್ವಾನ್‌ನಿಂದ ವಿಧಾನಸಭೆ ಚುನಾವಣೆಯಲ್ಲಿ, 2003 ರಲ್ಲಿ ಗುನ್ನೌರ್‌ನಿಂದ ಮತ್ತು 2007 ರಲ್ಲಿ ಗುನ್ನೌರ್ ಮತ್ತು ಬರ್ತಾನಾ ಎರಡರಿಂದಲೂ ಗೆದ್ದರು. 1993ರ ನಂತರ, ಸಮಾಜವಾದಿ ಸಿದ್ಧಾಂತವಾದಿ ರಾಮ್ ಮನೋಹರ್ ಲೋಹಿಯಾ ಅವರಿಂದ ಪ್ರಭಾವಿತರಾಗಿ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದ್ದರು. 

1989-91, 1993-95 ಮತ್ತು 2003-2007ರಲ್ಲಿ ಮೂರು ಬಾರಿ ಯುಪಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, 2012 ರಲ್ಲಿ ಸಮಾಜವಾದಿ ಪಕ್ಷವು ಮೊದಲ ಬಾರಿಗೆ ಪೂರ್ಣ ಬಹುಮತವನ್ನು ಪಡೆದಾಗ, ಮುಲಾಯಂ ಅಖಿಲೇಶ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರು. 

ಸಕ್ರಿಯ ರಾಜಕಾರಣದಲ್ಲಿ 'ಧರ್ತಿಪುತ್ರ' ಎಂಬ ನಾಮಾಂಕಿತದೊಂದಿಗೆ ಬದುಕಿದ್ದ ಮುಲಾಯಂ, ಪ್ರಧಾನಿ ಹುದ್ದೆಯ ಮಹತ್ವಾಕಾಂಕ್ಷೆಗಳನ್ನು ಪೋಷಿಸಿದ್ದರು. 1996 ರಲ್ಲಿ ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. 1996 ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರ ರಚಿಸಲು ಮುಂದಾದಾಗ, ಮುಲಾಯಂ ಅವರ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬಂದಿತ್ತು. 

ಸಮಾಜವಾದಿ ಪಕ್ಷವು ಅವರನ್ನು 2014 ರಲ್ಲಿ ಮತ್ತೊಮ್ಮೆ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿತು. ಆದರೆ, ಸಮಾಜವಾದಿ ನಾಯಕ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತದ ಧ್ವಜಧಾರಿ ಎಂದು ಹೇಳಿಕೊಳ್ಳುತ್ತಿದ್ದ ಪಕ್ಷ ಕುಟುಂಬ ರಾಜಕೀಯವನ್ನು ಪ್ರೋತ್ಸಾಹಿಸುತ್ತಿದೆ ಎಂದು ವಿರೋಧ ಕೇಳಿಬಂತು. ಸ್ವಜನಪಕ್ಷಪಾತ ಆರೋಪ ಮುಲಾಯಂ ಸಿಂಗ್ ಯಾದವ್ ಗೂ ಅಂಟಿಕೊಂಡಿತ್ತು. 

ಮುಲಾಯಂ ಅವರ ಸೋದರ ಸಂಬಂಧಿ ರಾಮಗೋಪಾಲ್ ಯಾದವ್, ಸಹೋದರ ಶಿವಪಾಲ್ ಯಾದವ್, ಪುತ್ರ ಅಖಿಲೇಶ್ ಯಾದವ್, ಸೋದರಳಿಯರಾದ ಧರ್ಮೇಂದ್ರ ಯಾದವ್ ಮತ್ತು ಅಕ್ಷಯಾ ಯಾದವ್, ಸೊಸೆ ಡಿಂಪಲ್ ಯಾದವ್ ಮತ್ತು ಮೊಮ್ಮಗ ತೇಜ್ ಪ್ರತಾಪ್ ಸಿಂಗ್ ಯಾದವ್ ರಾಜಕೀಯದಲ್ಲಿದ್ದಾರೆ.

2016 ರಲ್ಲಿ, ಎಂಎಸ್‌ವೈ ಪೋಷಿಸಿದ ಕುಟುಂಬದಲ್ಲಿನ ದೋಷದ ಸಾಲುಗಳು ಅವರ ಮಗ ಅಖಿಲೇಶ್ ಯಾದವ್, ಆಗಿನ ಯುಪಿ ಸಿಎಂ ಮತ್ತು ಕಿರಿಯ ಸಹೋದರ ಶಿವಪಾಲ್ ಯಾದವ್ ಅವರ ಮಧ್ಯೆ ಕಲಹಗಳು ಉಂಟಾದವು. ಮುಲಾಯಂ ಸಿಂಗ್ ಯಾದವ್ ಇದನ್ನೆಲ್ಲ ನೋಡಿ ಮೂಖರಾಗಿದ್ದರು. 

ಮುಲಾಯಂ ಅವರ ಮೌನವು ತಮ್ಮ ಮಗನನ್ನು ತಡಿಯಲ್ಲಿ ದೃಢವಾಗಿ ಸ್ಥಾಪಿಸುವ ಒಂದು ಚಾಣಾಕ್ಷ ರಾಜಕೀಯ ನಡೆ ಎಂದು ರಾಜಕೀಯ ವಲಯಗಳಲ್ಲಿ ಹಲವರು ಭಾವಿಸಿದರು. ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅವನತಿ ಕಾಣುತ್ತಾ ಭಾರತೀಯ ಜನತಾ ಪಕ್ಷ ಮೇಲುಗೈ ಸಾಧಿಸಿ ಕಳೆದೆರಡು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀರಿದ್ದು ಈಗ ಇತಿಹಾಸ. 

ಮುಲಾಯಂ ಸಿಂಗ್ ಯಾದವ್ ಅವರು ಕೇಂದ್ರ ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಹುತಾತ್ಮ ಯೋಧರ ಮೃತದೇಹಗಳನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com