

ನವದೆಹಲಿ: ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಬಳಸದಂತೆ ಹೇಳಿರುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಸೋಮವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಠಾಕ್ರೆ ಸಲ್ಲಿಸಿರುವ ಅರ್ಜಿಯು ಅಕ್ಟೋಬರ್ 8 ರಂದು ಚುನಾವಾಣಾ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿದೆ. ಇದು ನೈಸರ್ಗಿಕ ನ್ಯಾಯದ ತತ್ವಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಕಕ್ಷಿದಾರರಿಗೆ ಯಾವುದೇ ವಿವರಣೆಯನ್ನು ನೀಡದೆ ಅಂಗೀಕರಿಸಲಾಗಿದೆ ಎಂದು ಪ್ರತಿಪಾದಿಸಿದೆ.
ಅರ್ಜಿಯು ಭಾರತೀಯ ಚುನಾವಣಾ ಆಯೋಗ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನ ಪ್ರತಿವಾದಿಗಳನ್ನಾಗಿಸಿದೆ.
ಮುಂದಿನ ಸೂಚನೆ ಬರುವವರೆಗೂ ಶಿವಸೇನೆಯ ಯಾವುದೇ ಬಣಗಳು ಪಕ್ಷದ ‘ಬಿಲ್ಲು ಮತ್ತು ಬಾಣ’ ಚಿನ್ಹೆ ಹಾಗೂ ಶಿವಸೇನೆ ಎಂಬ ಹೆಸರನ್ನು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಅಕ್ಟೋಬರ್ 8ರಂದು ಘೋಷಿಸಿತ್ತು. ಇದು ಶಿವಸೇನೆ ಪಕ್ಷದ ಹೆಸರು ಮತ್ತು ಚಿನ್ಹೆಗಾಗಿ ಗುದ್ದಾಡುತ್ತಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಭಾರಿ ನಿರಾಸೆ ಉಂಟುಮಾಡಿತ್ತು.
ತನ್ನ ಮಧ್ಯಂತರ ಆದೇಶದಲ್ಲಿ, ಮುಂಬರುವ ಚುನಾವಣೆಗಳಿಗೆ ಎರಡೂ ಬಣಗಳು ಹೊಸ ಹೆಸರುಗಳನ್ನು ಆಯ್ಕೆ ಮಾಡಬಹುದು ಮತ್ತು ಚಿಹ್ನೆಗಳನ್ನು ಹಂಚಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿತ್ತು.