ಕಾನೂನು ಪ್ರಕಾರ ನಿರ್ಧಾರ ಕೈಗೊಳ್ಳಲಾಗಿದೆ: ಬಿಲ್ಕಿಸ್ ಬಾನೋ ಅಪರಾಧಿಗಳ ಬಿಡುಗಡೆ ಸಮರ್ಥಿಸಿಕೊಂಡ ಕೇಂದ್ರ ಸಚಿವ
ನವದೆಹಲಿ: ಅಪರಾಧಿಗಳ ಬಿಡುಗಡೆ ಕಾನೂನು ಪ್ರಕ್ರಿಯೆಯಾಗಿದ್ದು, ಇದರಲ್ಲಿ ತಪ್ಪಿದೆ ಎಂದೆನಿಸುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ಬಿಲ್ಕಿಸ್ ಬಾನೋ ಅಪರಾಧಿಗಳ ಬಿಡುಗಡೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಜೈಲುವಾಸ ಅನುಭವಿಸಿದ ಕೈದಿಗಳ ಬಿಡುಗಡೆಗೆ ಕೆಲವು ಪ್ರಕ್ರಿಯೆಗಳಿವೆ. ಪ್ರಸ್ತುತ ಬಿಡುಗಡೆಯಾಗಿರುವ ಅಪರಾಧಿಗಳು ಜೈಲಿನಲ್ಲಿ 14 ವರ್ಷ ಶಿಕ್ಷೆ ಅನುಭವಿಸಿದ್ದಾರೆ. ಅವರ ಉತ್ತಮ ನಡವಳಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಎಲ್ಲವೂ ಕಾನೂನು ಪ್ರಕಾರವೇ ನಡೆದಿದೆ. ಇದರಲ್ಲಿ ತಪ್ಪಾಗಿದೆ ಎಂದೆನಿಸುತ್ತಿಲ್ಲ ಎಂದು ಹೇಳಿದ್ದಾರೆ.
ಬಿಲ್ಕಿಸ್ ಬಾನೊ ಅತ್ಯಾಚಾರ ಪ್ರಕರಣದ 11 ಮಂದಿ ಅಪರಾಧಿಗಳನ್ನು ಅವಧಿಗೂ ಮುನ್ನವೇ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಗುಜರಾತ್‌ನಲ್ಲಿನ ಬಿಜೆಪಿ ಸರ್ಕಾರ, ಶಿಫಾರಸು ಸಲ್ಲಿಸಿತ್ತು. ಅದಕ್ಕೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ 2 ವಾರಕ್ಕೂ ಮುನ್ನವೇ ಅಂಗೀಕಾರ ನೀಡಿತ್ತು ಎನ್ನುವುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ವಲಯಗಳಿಂದ ಕೇಂದ್ರ ಸರ್ಕಾರದ ವಿರುದ್ಧ ವಿರೋಧಗಳು ವ್ಯಕ್ತವಾಗುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ