ಪಕ್ಷದಲ್ಲಿನ ನನ್ನ ಪಾತ್ರ, ಕಾರ್ಯ ನಿಯೋಜನೆ ಕುರಿತು ನೂತನ ಅಧ್ಯಕ್ಷರೇ ನಿರ್ಧರಿಸುತ್ತಾರೆ: ರಾಹುಲ್ ಗಾಂಧಿ

ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಿಗೆ ಸರ್ವೋಚ್ಚ ಸ್ಥಾನವಿದ್ದು, ಆ ಹುದ್ದೆಗೆ ಯಾರು ಆಯ್ಕೆಯಾದರು ಅವರೇ ಪಕ್ಷದಲ್ಲಿನ ನನ್ನ ಪಾತ್ರವನ್ನು ನಿರ್ಧರಿಸುತ್ತಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆದೋನಿ: ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಿಗೆ ಸರ್ವೋಚ್ಚ ಸ್ಥಾನವಿದ್ದು, ಆ ಹುದ್ದೆಗೆ ಯಾರು ಆಯ್ಕೆಯಾದರು ಅವರೇ ಪಕ್ಷದಲ್ಲಿನ ನನ್ನ ಪಾತ್ರವನ್ನು ನಿರ್ಧರಿಸುತ್ತಾರೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಎಲ್ಲಿ ನಿಯೋಜನೆಗೊಳಿಸಲಾಗುತ್ತದೆ, ನನ್ನ ಪಾತ್ರದ ಕುರಿತು ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ನಿರ್ಧರಿಸುತ್ತಾರೆಂದು ಹೇಳಿದರು. 

ಬಳಿಕ ಕಾರ್ಯವೈಖರಿ ಕುರಿತು ಅಧ್ಯಕ್ಷರಿಗೆ ವರದಿ ನೀಡುವಿರೇ ಎಂಬ ಪ್ರಶ್ನೆಗೆ ಉತ್ತರಿಸಿ, ಅಧ್ಯಕ್ಷರಿಗೆ ಸರ್ವೋಚ್ಛ ಅಧಿಕಾರವಿರುತ್ತದೆ. ಕಾಂಗ್ರೆಸ್ ನಲ್ಲಿರುವ ಪ್ರತೀಯೊಬ್ಬರೂ ಅವರಿಗೆ ವರದಿ ನೀಡಬೇಕು. ನನ್ನ ಪಾತ್ರ, ಕೆಲಸ ಕುರಿತೂ ಅವರೇ ನಿರ್ಧರಿಸುತ್ತಾರೆಂದು ಹೇಳಿದರು. 

ಅಧ್ಯಕ್ಷರ ಆಯ್ಕೆ ಅಧಿಕೃತವಾಗಿ ಘೋಷಣೆಯಾಗುವುದಕ್ಕೂ ಮುನ್ನವೇ ರಾಹುಲ್ ಗಾಂಧಿಯವರು ಮಲ್ಲಿಕಾರ್ಜುನ ಖರ್ಗೆಯವರೇ ಅಧ್ಯಕ್ಷರೆಂದು ಹೇಳಿದ್ದು, ಎಲ್ಲರಲ್ಲಿ ಕುತೂಹಲವನ್ನುಂಟು ಮಾಡಿತು. ನಂತರ ಇದನ್ನು ಗಮನಿಸಿದ ರಾಹುಲ್ ಅವರು, ಖರ್ಗೆ ಮತ್ತು ತರೂರ್ ಇಬ್ಬರು ಅನುಭವವುಳ್ಳ ನಾಯಕರು. ಅವರಿಗೆ ನನ್ನ ಸಲಹೆಯ ಅಗತ್ಯವಿರುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಉತ್ತರಪ್ರದೇಶದಲ್ಲಿ ನಡೆದ ಮತದಾನದಲ್ಲಿ ಅಕ್ರಮ ನಡೆದಿದೆ ಎಂಬ ಶಶಿ ತರೂರ್ ಅವರ ಆರೋಪಕ್ಕೆ ಉತ್ತರಿಸಿ, ಪಕ್ಷವು ಸಾಂಸ್ಥಿಕ ಚೌಕಟ್ಟನ್ನು ಒಳಗೊಂಡಿದ್ದು, ಎಲ್ಲವನ್ನೂ ಅದೇ ನೋಡಿಕೊಳ್ಳುತ್ತದೆ ಎಂದರು. 

ಚುನಾವಣಾ ಆಯೋಗವನ್ನು ಒಳಗೊಂಡಿರುವ ಏಕೈಕ ಪಕ್ಷ ನಮ್ಮದಾಗಿದೆ. ಮಧುಸೂಧನ್ ಮಿಸ್ಟ್ರಿ ಅವರು ನ್ಯಾಯಯುತ ವ್ಯಕ್ತಿಯಾಗಿದ್ದು, ಅಕ್ರಮಗಳ ಬಗ್ಗೆ ಅವರೇ ನಿರ್ಧಾರ ಕೈಗೊಳ್ಳುತ್ತಾರೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com