ಅನುಮಾನಾಸ್ಪದ ಓಡಾಟ: ತಮಿಳುನಾಡು ಮೀನುಗಾರನ ಮೇಲೆ ಗುಂಡು ಹಾರಿಸಿದ ಭಾರತೀಯ ನೌಕಾಪಡೆ!

ಕೊಡಿಯಾಕರೈ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಮೀನುಗಾರನೊಬ್ಬನ ಮೇಲೆ ಅನುಮಾನಗೊಂಡು ಭಾರತೀಯ ನೌಕಾಪಡೆ ಗುಂಡು ಹಾರಿಸಿರುವ ಘಟನೆ ಶುಕ್ರವಾರ ನಡೆದಿದೆ.
ಗುಂಡೇಟಿನಿಂದ ಗಾಯಗೊಂಡಿರುವ ಮೀನುಗಾರ.
ಗುಂಡೇಟಿನಿಂದ ಗಾಯಗೊಂಡಿರುವ ಮೀನುಗಾರ.

ರಾಮನಾಥಪುರ: ಕೊಡಿಯಾಕರೈ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಮೀನುಗಾರನೊಬ್ಬನ ಮೇಲೆ ಅನುಮಾನಗೊಂಡು ಭಾರತೀಯ ನೌಕಾಪಡೆ ಗುಂಡು ಹಾರಿಸಿರುವ ಘಟನೆ ಶುಕ್ರವಾರ ನಡೆದಿದೆ. 

ಗುಂಡೇಟಿನಿಂದ ಗಾಯಗೊಂಡ ಮೀನುಗಾರರನ್ನು ನೌಕಾ ಹೆಲಿಕಾಪ್ಟರ್ ಬಳಸಿ ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಮಧುರೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಮೈಲಾಡುತುರೈ ಮೂಲದ ನಿವಾಸಿಯಾಗಿರುವ ವೀರವೆಲ್ (30) ಗಾಯಗೊಂಡಿರುವ ವ್ಯಕ್ತಿಯಾಗಿದ್ದಾರೆ. ದೋಣಿ ಹಾಗೂ ಮೀನುಗಾರನ ಮೇಲೆ ನೌಕಾಪಡೆ ಹಲವು ಬಾರಿ ಗುಂಡು ಹಾರಿಸಿದ್ದು, ಪರಿಣಾಮ ವೀರವೆಲ್ ಅವರ ಕಾಲು ಹಾಗೂ ಹೊಟ್ಟೆ ಭಾಗಕ್ಕೆ ಗುಂಡು ತಾಕಿದೆ ಎಂದು ವರದಿಗಳು ತಿಳಿಸಿವೆ. 

ಘಟನೆ ಬಳಿಕ ರಾಮನಾಥಪುರಂ ಜಿಲ್ಲಾಧಿಕಾರಿ ಜಾನಿ ಟಾಮ್ ವರ್ಗೀಸ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಭಾರತ ಹಾಗೂ ಶ್ರೀಲಂಕಾವನ್ನು ಬೇರ್ಪಡಿಸುವ ಪಾಲ್ಕ್ ಕೊಲ್ಲೆಯ ಮೇಲೆ ಭಾರತೀಯ ನೌಕಾಪಡೆ ನಿರಂತರವಾಗಿ ಕಣ್ಗಾವಲಿಟ್ಟಿರುತ್ತದೆ ಎಂದು ಭಾರತೀಯ ನೌಕಾಪಡೆಯ ಅಧಿಕೃತ ಮೂಲಗಳು ಮಾಹಿತಿ ನೀಡಿದೆ. 

ಅಕ್ಟೋಬರ್ 21, 2022 ರ ಮುಂಜಾನೆ, ಭಾರತ ಶ್ರೀಲಂಕಾ ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯ (ಐಎಂಬಿಎಲ್) ಬಳಿ ಪಾಲ್ಕ್ ಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ನೌಕಾಪಡೆಗೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ದೋಣಿಯೊಂದು ಕಣ್ಣಿಗೆ ಬಿದ್ದಿದೆ. ಹಲವಾರು ಬಾರಿ ಎಚ್ಚರಿಗೆ ನೀಡಿದರು. ದೋಣಿಯ ಸಂಚಾರ ನಿಂತಿರಲಿಲ್ಲ. ಹೀಗಾಗಿ ಗುಂಡು ಹಾರಿಸಲಾಯಿತು. ಕಾರ್ಯವಿಧಾನಗಳ ಮೂಲಕವೇ ಗುಂಡು ಹಾರಿಸಲಾಗಿದೆ.

ದೋಣಿಯಲ್ಲಿದ್ದ ವ್ಯಕ್ತಿ ಗಾಯಗೊಂಡಿದ್ದು, ಪ್ರಾಥಮಿಕ ಚಿಕಿತ್ಸೆಗೆ ನೌಕಾಪಡೆಯ ಹೆಲಿಕಾಪ್ಟರ್ ನಲ್ಲಿಯೇ ರಾಮನಾಥಪುರಂ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ನಂತರ ಮಧುರೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಇದೀಗ ವ್ಯಕ್ತಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಘಟನೆ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com