ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

21ನೇ ಶತಮಾನದಲ್ಲೂ ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ? ದ್ವೇಷದ ಭಾಷಣದ ಬಗ್ಗೆ 'ಸುಪ್ರೀಂ' ಕಿಡಿ!

ದ್ವೇಷಪೂರಿತ ಭಾಷಣ ಅಥವಾ ದ್ವೇಷದ ಭಾಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಸಹನೆ ಹೊರಹಾಕಿದೆ. ದ್ವೇಷದ ಭಾಷಣ ಮಾಡುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರ್ಟ್‌ ಆದೇಶಿಸಿದೆ.
Published on

ನವದೆಹಲಿ: ದ್ವೇಷಪೂರಿತ ಭಾಷಣ ಅಥವಾ ದ್ವೇಷದ ಭಾಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಸಹನೆ ಹೊರಹಾಕಿದೆ. ದ್ವೇಷದ ಭಾಷಣ ಮಾಡುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಕೋರ್ಟ್‌ ಆದೇಶಿಸಿದೆ.

ದೇಶದಲ್ಲಿ ದ್ವೇಷದ ವಾತಾವರಣ ಪ್ರಾಬಲ್ಯ ಹೊಂದಿದೆ. ದ್ವೇಷದ ಭಾಷಣಗಳು ಆತಂಕಕಾರಿಯಾಗಿದ್ದು ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಔಪಚಾರಿಕವಾಗಿ ದೂರು ದಾಖಲಾಗುವವರೆಗೂ ಕಾಯದೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಕ್ರಮಕೈಗೊಳ್ಳುವಂತೆ ಆದೇಶಿಸಿದೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟೀಸ್ ನೀಡಿದೆ. ಇನ್ನು ದ್ವೇಷ ಭಾಷಣಗಳ ಕುರಿತಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ನೀಡುವಂತೆ ಮೂರು ರಾಜ್ಯಗಳಿಗೆ ನೋಟಿಸ್ ನೀಡಿದೆ.

ಭಾರತದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಮತ್ತು ಭಯಭೀತಗೊಳಿಸುವ ಬೆದರಿಕೆಗಳನ್ನು ತಡೆಯಲು ತಕ್ಷಣದ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರ ಪೀಠ, 21ನೇ ಶತಮಾನದಲ್ಲಿ ಏನಾಗುತ್ತಿದೆ. ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ? ನಾವು ದೇವರನ್ನು ಎಷ್ಟು ಚಿಕ್ಕದಾಗಿ ಮಾಡಿದ್ದೇವೆ? ಭಾರತದ ಸಂವಿಧಾನವು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದರು.

ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್, ಇಂತಹ ವಿಷಯಗಳಿಗೆ ನಾವು ನ್ಯಾಯಾಲಯಕ್ಕೆ ಬರಬಾರದು. ಆದರೆ ನಾವು ಅನೇಕ ದೂರುಗಳನ್ನು ಕೊಟ್ಟಿದ್ದೇವೆ. ಆದರೆ ಯಾವುದೇ ಕ್ರಮಗಳು ನಡೆಯುತ್ತಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಬರದೆ ಬೇರೆ ದಾರಿ ಇಲ್ಲ ಎಂದು ವಾದಿಸಿದರು. ಕಪಿಲ್ ಸಿಬಲ್ ಅವರು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ಭಾಷಣವನ್ನು ಉಲ್ಲೇಖಿಸಿ, ಬಿಜೆಪಿ ಮುಖಂಡರೊಬ್ಬರು ಈ ರೀತಿ ದ್ವೇಷದ ಭಾಷಣ ಮಾಡಿದ್ದಾರೆ. ಅವರು ಮುಸ್ಲಿಂ ಅಂಗಡಿಯಿಂದ ಏನನ್ನು ಖರೀದಿ ಮಾಡುವುದಿಲ್ಲ, ಅವರಿಗೆ ಕೆಲಸ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಆಡಳಿತವು ಏನೂ ಮಾಡಿಲ್ಲ ಎಂದು ವಾದಿಸಿದರು.

ದೇಶಾದ್ಯಂತ ದ್ವೇಷದ ಅಪರಾಧಗಳು ಮತ್ತು ದ್ವೇಷ ಭಾಷಣಗಳ ಘಟನೆಗಳ ಬಗ್ಗೆ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಬೇಕು. ಅಲ್ಲದೆ ಅಂತಹವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(UAPA) ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಅರ್ಜಿದಾರ ಶಾಹೀನ್ ಅಬ್ದುಲ್ಲಾ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com