ಕೊಯಮತ್ತೂರು ಸ್ಫೋಟ ಪ್ರಕರಣ ಎನ್ಐಎ ತನಿಖೆಗೆ: ತಮಿಳುನಾಡು ಸರ್ಕಾರ

ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿದೆ.
ಸ್ಫೋಟಗೊಂಡಿದ್ದ ಕಾರು
ಸ್ಫೋಟಗೊಂಡಿದ್ದ ಕಾರು

ಚೆನ್ನೈ: ಕೊಯಮತ್ತೂರು ಕಾರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ತಮಿಳುನಾಡು ಸರ್ಕಾರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಅಕ್ಟೋಬರ್ 23 ರಂದು ಕೊಯಮತ್ತೂರಿನಲ್ಲಿ ಸಂಭವಿಸಿದ  ಕಾರಿನ ಎಲ್‌ಪಿಜಿ ಸಿಲಿಂಡರ್ ಸ್ಫೋಟದ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆಗೆ ಶಿಫಾರಸು ಮಾಡಿದ್ದಾರೆ. ಕೊಯಮತ್ತೂರಿನ ಉಕ್ಕಡಂ ಪ್ರದೇಶದಲ್ಲಿ ಕಾರಿನ ಸಿಲಿಂಡರ್ ಸ್ಫೋಟಗೊಂಡಿತ್ತು. ಪ್ರಕರಣದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲು ಮತ್ತು ಕೊಯಮತ್ತೂರಿನಲ್ಲಿ ಭದ್ರತೆಯನ್ನು ಮುಂದುವರಿಸಲು ಶಿಫಾರಸು ಪತ್ರದಲ್ಲಿ ಸಿಎಂ ಸ್ಟಾಲಿನ್ ಕೋರಿದ್ದಾರೆ.

ಪ್ರಕರಣದ ಮುಂದುವರಿದ ತನಿಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಪ್ರಧಾನ ಕಚೇರಿಯಲ್ಲಿ ಹಿಂದಿನ ದಿನ ನಡೆದ ವಿವರವಾದ ಪರಿಶೀಲನಾ ಸಭೆಯ ನಂತರ ಸ್ಟಾಲಿನ್ ಈ ಆದೇಶವನ್ನು ಹೊರಡಿಸಿದ್ದಾರೆ. ಈ ಪರಿಶೀಲನಾ ಸಭೆಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ನಡೆಸುತ್ತಿರುವ ತನಿಖೆ ಮತ್ತು ಕೊಯಮತ್ತೂರು ಜಿಲ್ಲೆಯಲ್ಲಿ ಮಾಡಲಾದ ಮುಂಜಾಗ್ರತಾ ಭದ್ರತಾ ವ್ಯವಸ್ಥೆಗಳ ಕುರಿತು ಚರ್ಚಿಸಲಾಯಿತು. ಮುಖ್ಯಮಂತ್ರಿಗಳು ಕೊಯಮತ್ತೂರು ಜಿಲ್ಲೆಯಲ್ಲಿ 'ತನಿಖೆ ನಡೆಸುತ್ತಿರುವ' ಪ್ರಕರಣದ ಪ್ರಸ್ತುತ ಸ್ಥಿತಿಯ ಬಗ್ಗೆ ಹೆಚ್ಚಿನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಂತಹ ಘಟನೆಗಳ ತನಿಖೆಯಲ್ಲಿ ರಾಜ್ಯಾಚೆಗಿನ ಬೆಳವಣಿಗೆಗಳು ಮತ್ತು ಅಂತರಾಷ್ಟ್ರೀಯ ಸಂಬಂಧಗಳ ಸಾಧ್ಯತೆಗಳಿರುವುದರಿಂದ ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವರ್ಗಾಯಿಸಲು ಕೇಂದ್ರ ಸರ್ಕಾರಕ್ಕೆ ಸೂಕ್ತ ಶಿಫಾರಸುಗಳನ್ನು ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಮಂಗಳವಾರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಯನ್ನು ಜಾರಿಗೊಳಿಸಿದ ನಂತರ ಮತ್ತು ಒಂದು ದಿನದ ಹಿಂದೆ ಅನುಮಾನಾಸ್ಪದ ಸಂದರ್ಭಗಳಲ್ಲಿ ಸುಟ್ಟು ಕರಕಲಾದ ಜಮೀಶಾ ಮುಬಿನ್ ಅವರ ಸಹಚರರಾದ ಐವರನ್ನು ಬಂಧಿಸಿದ ನಂತರ ಈ ಕ್ರಮ ಬಂದಿದೆ. 

ಅವರು ಚಾಲನೆ ಮಾಡುತ್ತಿದ್ದ ಮಾರುತಿ 800 ಕಾರಿನೊಳಗಿದ್ದ ಎಲ್‌ಪಿಜಿ ಸಿಲಿಂಡರ್ ಬೆಳಗಿನ ಜಾವ 4 ಗಂಟೆ ಸುಮಾರಿಗೆ ದೇವಸ್ಥಾನದ ಬಳಿ ಸ್ಫೋಟಗೊಂಡಿದೆ. ಪೊಲೀಸರ ಪ್ರಕಾರ, ಇಂಜಿನಿಯರಿಂಗ್ ಪದವೀಧರರಾಗಿದ್ದ 25 ವರ್ಷದ ಮುಬಿನ್ ಅವರನ್ನು ಈ ಹಿಂದೆ ಭಯೋತ್ಪಾದಕ ಸಂಬಂಧಗಳ ಆರೋಪದ ಮೇಲೆ 2019 ರಲ್ಲಿ ಎನ್‌ಐಎ ಪ್ರಶ್ನಿಸಿತ್ತು. ಈತನನ್ನು ಪ್ರಕರಣದ ಪ್ರಾಥಮಿಕ ಆರೋಪಿಯನ್ನಾಗಿ ದಾಖಲಿಸಲಾಗಿದೆ. ಮೊಹಮ್ಮದ್ ಥಲ್ಕಾ, 25, ಮೊಹಮ್ಮದ್ ಅಸರುದ್ದೀನ್, 25, ಮುಹಮ್ಮದ್ ರಿಯಾಜ್, 27, ಫಿರೋಜ್ ಇಸ್ಮಾಯಿಲ್, 27, ಮತ್ತು ಮೊಹಮ್ಮದ್ ನವಾಜ್ ಇಸ್ಮಾಯಿಲ್, 27 ಎಂಬಾತರರನ್ನು ಸೋಮವಾರ ರಾತ್ರಿ ಬಂಧಿಸಲಾಗಿತ್ತು.

ಕೋಮು ಸೂಕ್ಷ್ಮ ಪ್ರದೇಶವಾದ ಉಕ್ಕಡಂನಲ್ಲಿ ಸ್ಫೋಟ ಸಂಭವಿಸಿದ್ದರಿಂದ, ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೈಲೇಂದ್ರ ಬಾಬು ಮತ್ತು ಹೆಚ್ಚುವರಿ ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ತಾಮರೈ ಕಣ್ಣನ್ ಸೇರಿದಂತೆ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದರು. ಉಕ್ಕಡಂನಲ್ಲಿರುವ ಮುಬಿನ್ ಅವರ ಮನೆಯಲ್ಲಿ ಸ್ಫೋಟಕಗಳನ್ನು ತಯಾರಿಸಲು ಬಳಸುವ ವಸ್ತುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಡಿಜಿಪಿ ಭಾನುವಾರ ಹೇಳಿದ್ದಾರೆ.

ಅಂತೆಯೇ ಸ್ಫೋಟಕಗಳನ್ನು ತಯಾರಿಸಲು ಬಳಸಬಹುದಾದ 75 ಕೆಜಿ ಪೊಟ್ಯಾಷಿಯಂ ನೈಟ್ರೇಟ್, ಇದ್ದಿಲು, ಅಲ್ಯೂಮಿನಿಯಂ ಪೌಡರ್ ಮತ್ತು ಗಂಧಕವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com