ಇಂಟರ್ನೆಟ್, ಸೋಷಿಯಲ್ ಮೀಡಿಯಾಗಳು ಭಯೋತ್ಪಾದಕರ ಪ್ರಬಲ ಅಸ್ತ್ರಗಳು: ಎಸ್ ಜೈಶಂಕರ್

ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು ಭಯೋತ್ಪಾದಕರ ಟೂಲ್‌ಕಿಟ್‌ನಲ್ಲಿ ಪ್ರಬಲ ಸಾಧನಗಳಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್ ಜೈಶಂಕರ್
Updated on

ನವದೆಹಲಿ: ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳು(Internet and Social media) ಭಯೋತ್ಪಾದಕರ ಟೂಲ್‌ಕಿಟ್‌ನಲ್ಲಿ ಪ್ರಬಲ ಸಾಧನಗಳಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್(S Jaishankar) ಆತಂಕ ವ್ಯಕ್ತಪಡಿಸಿದ್ದಾರೆ.

ಅವರು ಇಂದು ಭಯೋತ್ಪಾದನೆ ನಿಗ್ರಹ ಸಮಿತಿ(CTC)ಯ ವಿಶೇಷ ಸಭೆಯಲ್ಲಿ ಮಾತನಾಡಿ, ಸಮಾಜವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪ್ರಚಾರ, ಆಮೂಲಾಗ್ರೀಕರಣ ಮತ್ತು ಪಿತೂರಿ ಸಿದ್ಧಾಂತಗಳನ್ನು ಹರಡುವುದರಲ್ಲಿ ಭಯೋತ್ಪಾದಕರು ಮತ್ತು ಉಗ್ರಗಾಮಿ ಸಂಘಟನೆಗಳಿಗೆ ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾ ವೇದಿಕೆಗಳು ಉತ್ತಮ ದುರುಪಯೋಗ ಸಾಧನಗಳಾಗಿ ಮಾರ್ಪಟ್ಟಿವೆ ಎಂದರು. ಅವರು ಇಂದು ದೆಹಲಿಯಲ್ಲಿ ಭಯೋತ್ಪಾದಕರ ಉದ್ದೇಶಗಳಿಗೆ ಹೊಸ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳ ಬಳಕೆಯನ್ನು ನಿಗ್ರಹಿಸುವ ವಿಶ್ವಸಂಸ್ಥೆಯ ವಿಶೇಷ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಮಾನವ ಜನಾಂಗಕ್ಕೆ ಭಯೋತ್ಪಾದನೆ, ಭಯೋತ್ಪಾದಕ ಕುಕೃತ್ಯಗಳು(Terrorist Toolkit) ದೊಡ್ಡ ಬೆದರಿಕೆ ಎಂದು ಬಣ್ಣಿಸಿದ ಅವರು, ಕಳೆದ ಎರಡು ದಶಕಗಳಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಈ ಬೆದರಿಕೆಯನ್ನು ಎದುರಿಸಲು ಪ್ರಾಥಮಿಕವಾಗಿ ಭಯೋತ್ಪಾದನೆ-ವಿರೋಧಿ ನಿರ್ಬಂಧಗಳ ಆಡಳಿತದ ಸುತ್ತಲೂ ನಿರ್ಮಿಸಲಾದ ಪ್ರಮುಖ ಕಾರ್ಯಾಚರಣೆಯನ್ನು ಅಭಿವೃದ್ಧಿಪಡಿಸಿದೆ. ಭಯೋತ್ಪಾದನೆಯನ್ನು ಉದ್ಯಮವನ್ನಾಗಿ ಪರಿವರ್ತಿಸಿದ ದೇಶಗಳನ್ನು ಗಮನಕ್ಕೆ ತರುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.

ಮುಖ್ಯವಾಗಿ ಏಷ್ಯಾ ಮತ್ತು ಆಫ್ರಿಕಾ ಖಂಡಗಳು ಸೇರಿದಂತೆ ಜಗತ್ತಿನಾದ್ಯಂತ ಭಯೋತ್ಪಾದನೆ ವಿಸ್ತರಣೆಯಾಗುತ್ತಾ ಬೆಳೆಯುತ್ತಾ ಹೋಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕ ಗುಂಪುಗಳು ತಂತ್ರಜ್ಞಾನಗಳ ಮೂಲಕ ತಮ್ಮ ಸಾಮರ್ಥ್ಯಗಳನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ. ತಂತ್ರಜ್ಞಾನ ಮತ್ತು ಹಣವನ್ನು ಬಳಸುತ್ತಾರೆ, ಮುಖ್ಯವಾಗಿ ಮುಕ್ತ ಸಮಾಜಗಳ ನೀತಿಯನ್ನು ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಪ್ರಗತಿಯ ಮೇಲೆ ಆಕ್ರಮಣ ಮಾಡಲು ಬಳಸುತ್ತಾರೆ ಎಂದು ಹೇಳಿದರು.

ಭಯೋತ್ಪಾದನೆ ನಿಗ್ರಹಕ್ಕೆ ವಿಶ್ವಸಂಸ್ಥೆ ಟ್ರಸ್ಟ್ ನಿಧಿಗೆ ಭಾರತ ಸಹಾಯ: ಭಯೋತ್ಪಾದನೆಯನ್ನು ಎದುರಿಸಲು ಸದಸ್ಯ ರಾಷ್ಟ್ರಗಳಿಗೆ ಸಾಮರ್ಥ್ಯ ವೃದ್ಧಿಸುವ ಬೆಂಬಲಕ್ಕೆ ಸಹಾಯ ಮಾಡಲು ಭಾರತವು ಭಯೋತ್ಪಾದನೆ ನಿಗ್ರಹಕ್ಕಾಗಿ (UNOCT) ಯುಎನ್ ಟ್ರಸ್ಟ್ ಫಂಡ್‌ಗೆ ಅರ್ಧ ಮಿಲಿಯನ್ ಡಾಲರ್‌ಗಳನ್ನು ನೀಡಲಿದೆ ಎಂದು ಇದೇ ಸಂದರ್ಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಘೋಷಿಸಿದರು. 

ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕಚೇರಿ, ಯುಎನ್‌ಒಸಿಟಿಯಂತಹ ವಿಶ್ವಸಂಸ್ಥೆ ಅಂಗಗಳಿಗೆ ಧನಸಹಾಯವನ್ನು ಹೆಚ್ಚಿಸಲು ಸದಸ್ಯ ರಾಷ್ಟ್ರಗಳಿಗೆ ಒತ್ತಾಯಿಸುತ್ತೇನೆ. ಈ ವರ್ಷ ಭಯೋತ್ಪಾದನೆ ನಿಗ್ರಹಕ್ಕಾಗಿ ಯುಎನ್ ಟ್ರಸ್ಟ್ ಫಂಡ್‌ಗೆ ಭಾರತವು ಅರ್ಧ ಮಿಲಿಯನ್ ಡಾಲರ್‌ಗಳ ಸ್ವಯಂಪ್ರೇರಿತ ಕೊಡುಗೆಯನ್ನು ನೀಡಲಿದೆ ಎಂದು ಪ್ರಕಟಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com