ಸರಬ್ಜಿತ್ ಸಿಂಗ್ ಅವರ ಪತ್ನಿ ಸುಖಪ್ರೀತ್ ಕೌರ್
ಸರಬ್ಜಿತ್ ಸಿಂಗ್ ಅವರ ಪತ್ನಿ ಸುಖಪ್ರೀತ್ ಕೌರ್

2013ರಲ್ಲಿ ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಅವರ ಪತ್ನಿ ರಸ್ತೆ ಅಪಘಾತದಲ್ಲಿ ಸಾವು

ಗೂಢಚಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಪಾಕಿಸ್ತಾನದ ಕೋರ್ಟ್ ನಿಂದ ಮರಣದಂಡನೆಗೆ ಗುರಿಯಾಗಿ 2013ರಲ್ಲಿ ಲಾಹೋರ್ ಜೈಲಿನಲ್ಲಿ ನಿಧನರಾಗಿದ್ದ ಸರಬ್ಜಿತ್ ಸಿಂಗ್ ಅವರ ಪತ್ನಿ ಸೋಮವಾರ ಮೃತಪಟ್ಟಿದ್ದಾರೆ.
Published on

ಅಮೃತಸರ: ಗೂಢಚಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಪಾಕಿಸ್ತಾನದ ಕೋರ್ಟ್ ನಿಂದ ಮರಣದಂಡನೆಗೆ ಗುರಿಯಾಗಿ 2013ರಲ್ಲಿ ಲಾಹೋರ್ ಜೈಲಿನಲ್ಲಿ ನಿಧನರಾಗಿದ್ದ ಸರಬ್ಜಿತ್ ಸಿಂಗ್ ಅವರ ಪತ್ನಿ ಸೋಮವಾರ ಮೃತಪಟ್ಟಿದ್ದಾರೆ.

ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಸಿಂಗ್ ಅವರ ಪತ್ನಿ ಸುಖಪ್ರೀತ್ ಕೌರ್ ಅವರು, ಇಲ್ಲಿನ ಫತೇಪುರ್ ಬಳಿ ಆಕಸ್ಮಿಕವಾಗಿ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಕೌರ್ ಅವರ ಅಂತ್ಯಕ್ರಿಯೆ ಮಂಗಳವಾರ ತರ್ನ್ ತರಣ್‌ ಪ್ರಾಂತ್ಯದ ಅವರ ಊರಾದ ಭಿಖಿವಿಂಡ್‌ನಲ್ಲಿ ನಡೆಯಲಿದೆ  ಎಂದು ತಿಳಿಸಿದ್ದಾರೆ.

ಸರಬ್ಜಿತ್ ಸಿಂಗ್ ಮತ್ತು ಸುಖಪ್ರೀತ್ ಕೌರ್ ದಂಪತಿಗೆ ಪೂನಂ ಮತ್ತು ಸ್ವಪಂದೀಪ್ ಕೌರ್ ಎಂಬ ಇಬ್ಬರು ಪುತ್ರಿಯರು ಇದ್ದರು.

ಜೂನ್‌ನಲ್ಲಿ, ತನ್ನ ಸಹೋದರನನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡುವ ಪ್ರಯತ್ನದಲ್ಲಿ ಸುದೀರ್ಘ ಹೋರಾಟ ನಡೆಸಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಕೌರ್ ಅವರು ಎದೆನೋವಿನಿಂದ ಮೃತಪಟ್ಟಿದ್ದರು.

22 ವರ್ಷಗಳ ಕಾಲ ಲಾಹೋರ್ ಜೈಲಿನಲ್ಲಿದ್ದ 49 ವರ್ಷದ ಸರಬ್ಜಿತ್ ಸಿಂಗ್ ಮೇಲೆ 2013ರ ಏಪ್ರಿಲ್‌ನಲ್ಲಿ ಕೈದಿಗಳು ಹಲ್ಲೆ ನಡೆಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದರು.

ಆಪಾದಿತನ ವಿರುದ್ಧ ಭಯೋತ್ಪಾದನೆ ಮತ್ತು ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದ ನ್ಯಾಯಾಲಯವು 1991 ರಲ್ಲಿ ಮರಣದಂಡನೆ ಶಿಕ್ಷೆ ನೀಡಿತು. ಆದಾಗ್ಯೂ, ಸರ್ಕಾರವು 2008 ರಲ್ಲಿ ಅನಿರ್ದಿಷ್ಟ ಅವಧಿಗೆ ಅವರ ಮರಣದಂಡನೆಯನ್ನು ತಡೆಹಿಡಿಯಿತು.

ಬಳಿಕ ಅವರ ಮರಣದ ನಂತರ, ಸರಬ್ಜಿತ್ ಅವರ ದೇಹವನ್ನು ಲಾಹೋರ್‌ನಿಂದ ಅಮೃತಸರಕ್ಕೆ ತರಲಾಯಿತು. ಅಲ್ಲಿ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com