ದೇಶದಾದ್ಯಂತ ಪಿಎಫ್‌ಐ ಸಂಘಟನೆ ಮೇಲೆ ಮತ್ತೆ ದಾಳಿ: 100ಕ್ಕೂ ಅಧಿಕ ಮಂದಿ ವಶಕ್ಕೆ

ದೇಶದಾದ್ಯಂತ ಪಿಎಫ್‌ಐ ಸಂಘಟನೆ ಮೇಲೆ ಮತ್ತೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದು, ನೂರಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಎನ್ಐಎ ದಾಳಿ
ಎನ್ಐಎ ದಾಳಿ
Updated on

ನವದೆಹಲಿ: ದೇಶದಾದ್ಯಂತ ಪಿಎಫ್‌ಐ ಸಂಘಟನೆ ಮೇಲೆ ಮತ್ತೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದು, ನೂರಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಮಧ್ಯಪ್ರದೇಶ, ಕರ್ನಾಟಕ, ಅಸ್ಸಾಂ, ದೆಹಲಿ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿ ಪಿಎಫ್‌ಐ ವಿರುದ್ಧ ರಾಜ್ಯ ಪೊಲೀಸರು ಮತ್ತು ಅದರ ಎಟಿಎಸ್ ಮತ್ತು ಎನ್ಐಎ ಘಟಕಗಳಿಂದ ದಾಳಿ ನಡೆಯುತ್ತಿದೆ. 8 ರಾಜ್ಯಗಳಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಚೇರಿಗಳು ಮತ್ತು ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು 100ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳವಾರ ಬೆಳಗ್ಗೆ ಪಿಎಫ್ಐ ಕಾರ್ಯಕರ್ತರಿಗೆ ಎನ್ಐಎ ಮತ್ತೆ ಶಾಕ್ ನೀಡಿದ್ದು, ರಾಜ್ಯಗಳ ವಿವಿಧ ತನಿಖಾ ಸಂಸ್ಥೆಗಳ ಜೊತೆ ಸೇರಿ ಪಿಎಫ್‌ಐ ಮೇಲೆ ಮತ್ತೊಂದು ಸುತ್ತಿನ ದಾಳಿ ಮಾಡಿದೆ. ಕಳೆದ ಗುರುವಾರ (ಸೆ.22) ಕೂಡ ಎನ್‌ಐಎ ದಾಳಿ ಮಾಡಿ ಪಿಎಫ್‌ಐ ಮುಖಂಡರು ಸೇರಿದಂತೆ 106 ಜನರನ್ನು ವಶಕ್ಕೆ ಪಡೆದಿತ್ತು. ಕರ್ನಾಟಕ, ಗುಜರಾತ್, ದೆಹಲಿ, ಅಸ್ಸಾಂ ಸೇರಿ 8 ರಾಜ್ಯಗಳಲ್ಲಿ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ದಾಳಿ, 40ಕ್ಕೂ ಹೆಚ್ಚು ಮಂದಿ ವಶಕ್ಕೆ
ಕರ್ನಾಟಕದ ಉಡುಪಿ, ಶಿವಮೊಗ್ಗ, ಕೋಲಾರ, ಚಿತ್ರದುರ್ಗ, ಚಾಮರಾಜನಗರ ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್‌ ಜಿಲ್ಲೆಗಳಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿ 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆಯಲ್ಲಿ 7 ಜನ, ವಿಜಯಪುರದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ, ಬೆಳಗಾವಿಯಲ್ಲಿ 5 ಜನ, ಚಿತ್ರದುರ್ಗದಲ್ಲಿ ಒಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉಗ್ರವಾದ, ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ, ಶಸ್ತ್ರಾಸ್ತ್ರ ತರಬೇತಿ ನೀಡಲು ಶಿಬಿರಗಳ ಆಯೋಜನೆ, ಉಗ್ರವಾದ ಚಟುವಟಿಕೆಗಳಿಗೆ ಪ್ರೆರೇಪಣೆ, ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಸೇರಿದಂತೆ ಹಲವಾರ ಆರೋಪಗಳನ್ನು ಪಿಎಫ್‌ಐ ಮೇಲೆ ಮಾಡಲಾಗಿದೆ. 

ಬಾಗಲಕೋಟೆಯಲ್ಲಿ 6 ಪಿಎಫ್‍ಐ ಕಾರ್ಯಕರ್ತರು, ಚಾಮರಾಜನಗರದಲ್ಲಿ ಪಿಎಫ್‍ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com