ಬೆಂಗಳೂರು: ರಾಜ್ಯದಲ್ಲಿ SDPI, PFI ಸಂಘಟನೆಗಳ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆಯೇ ದಾಳಿಗಿಳಿದ ಪೊಲೀಸರು ಪಿಎಫ್ಐ ಮತ್ತು ಎಸ್ ಡಿಪಿಐಗೆ ಸೇರಿದ ಸುಮಾರು 40 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ವಾರ ರಾಷ್ಟ್ರೀಯ ತನಿಖಾ ದಳ(NIA) ರಾಜ್ಯದ ಹಲವು ಭಾಗಗಳಲ್ಲಿ ದಾಳಿ ನಡೆಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ನಾಯಕರನ್ನು ಬಂಧಿಸಿತ್ತು. ಈಗ ರಾಜ್ಯಾದ್ಯಂತ ಕರ್ನಾಟಕ ಪೊಲೀಸರು ಪಿಎಫ್ಐ ಮತ್ತು ಎಸ್‌ಡಿಪಿಐಗೆ(SDPI) ಶಾಕ್ ನೀಡಿದ್ದು, ಮುಸ್ಲಿಂ ಸಂಘಟನೆಗಳ ನಾಯಕರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಬೀದರ್, ಚಿತ್ರದುರ್ಗ, ಬಾಗಲಕೋಟೆ ಮತ್ತು ಚಾಮರಾಜನಗರದಲ್ಲಿನ ಪಿಎಫ್ಐ ಮತ್ತು ಎಸ್ ಡಿಪಿಐ ಮುಖಂಡರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ನಾಲ್ಕು ಜಿಲ್ಲೆಗಳು ಮಾತ್ರವಲ್ಲದೇ ರಾಮನಗರ, ಮಂಗಳೂರು, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಬೆಂಗಳೂರು ಗ್ರಾಮೀಣ, ಕೋಲಾರ, ಮೈಸೂರಿನಲ್ಲೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಬಿದರ್‌ನಿಂದ ಚಾಮರಾಜನಗರದವರೆಗೆ ದಾಳಿ ನಡೆಸಿ 40ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮತ್ತು ಆಯಾ ಜಿಲ್ಲೆಗಳ ಎಸ್‌ಪಿ ಹಾಗೂ ಕಮಿಷನರ್‌ಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ವಶಕ್ಕೆ ಪಡೆದವರು ಪಿಎಫ್ಐ ಪ್ರತಿಭಟನೆ ಹಾಗೂ ಪಿಎಫ್ಐಗೆ ಸೇರಿದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿದ್ದರು. ಇದರ ಜೊತೆ ಇವರು ಭಾರೀ ಫಂಡಿಂಗ್ ಮಾಡುತ್ತಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಬೀದರ್‌ನಲ್ಲಿ ಪಿಎಫ್‍ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ, ಎಸ್‍ಡಿಪಿಐ ಜಿಲ್ಲಾ ಕಾರ್ಯದರ್ಶಿ ಶೇಕ್ ಮಕ್ಸೂದ್ ವಶಕ್ಕೆ ಪಡೆಯಲಾಗಿದೆ. ಚಿತ್ರದುರ್ಗದಲ್ಲಿ ಪಿಎಫ್‍ಐ ಮುಖಂಡ ಅಫನ್ ಅಲಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಅಂತೆಯೇ ಬಾಗಲಕೋಟೆಯಲ್ಲಿ 6 ಪಿಎಫ್‍ಐ ಕಾರ್ಯಕರ್ತರು, ಚಾಮರಾಜನಗರದಲ್ಲಿ ಪಿಎಫ್‍ಐ ಜಿಲ್ಲಾಧ್ಯಕ್ಷ ಕಪಿಲ್, ಕಾರ್ಯದರ್ಶಿ ಸುಯೇಬ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಶಾಂತಿ ಕದಡುವ ಕೃತ್ಯದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
Advertisement