ಬಿಹಾರದಲ್ಲಿ ಮಹಾ ವಿಕಾಸ್ ಆಘಾಡಿ ಮಾದರಿ ಸರ್ಕಾರ? ಆರ್ ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಬೆಂಬಲ; ನಿತೀಶ್ ಬಿಜೆಪಿ ಸಖ್ಯ ತೊರೆಯುವ ಸಾಧ್ಯತೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಬಿಹಾರದಲ್ಲಿ ಎಲ್ಲಾ ಎನ್‌ಡಿಎಯೇತರ ಪಕ್ಷಗಳನ್ನು ಒಳಗೊಂಡಿರುವ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮಾದರಿಯ ಸಮ್ಮಿಶ್ರ ಸರ್ಕಾರ ರಚನೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗುತ್ತಿದೆ.
Published: 09th August 2022 01:01 AM | Last Updated: 09th August 2022 01:31 PM | A+A A-

ಮುಖ್ಯಮಂತ್ರಿ ನಿತೀಶ್ ಕುಮಾರ್
ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಬಿಹಾರದಲ್ಲಿ ಎಲ್ಲಾ ಎನ್‌ಡಿಎಯೇತರ ಪಕ್ಷಗಳನ್ನು ಒಳಗೊಂಡಿರುವ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮಾದರಿಯ ಸಮ್ಮಿಶ್ರ ಸರ್ಕಾರ ರಚನೆಗೆ ಬೇಕಾದ ಎಲ್ಲಾ ರೀತಿಯ ಸಿದ್ಧತೆ ಮಾಡಲಾಗುತ್ತಿದೆ.
ನಿತೀಶ್ ಕುಮಾರ್ ಅವರು ಈಗಾಗಲೇ ಹಂಗಾಮಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮೂರು ಎಡಪಕ್ಷಗಳಾದ ಸಿಪಿಐ (ಎಂಎಲ್), ಸಿಪಿಐ (ಎಂ), ಮತ್ತು ಸಿಪಿಐ, ಪ್ರಮುಖ ವಿರೋಧ ಪಕ್ಷ ಆರ್‌ಜೆಡಿಯ ನಾಯಕರಾದ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಹಾರ: ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆದು ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಳ್ಳುವರೇ? ಮಂಗಳವಾರ ನಿರ್ಧಾರ ಪ್ರಕಟ
ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯಾಗಿ ಬೆಂಬಲಿಸಲು ಎಲ್ಲ ವಿರೋಧ ಪಕ್ಷಗಳು ಒಪ್ಪಿಗೆ ಸೂಚಿಸಿರುವುದರಿಂದ ಮೈತ್ರಿ ರಚನೆ ಕಾರ್ಯ ನಡೆದಿದೆ. ಮೂಲಗಳ ಪ್ರಕಾರ, ಈ ವಾರದೊಳಗೆ ಪ್ರಮಾಣವಚನ ಸ್ವೀಕರಿಸುವ ಹೊಸ ಸರ್ಕಾರಕ್ಕೆ ಎಲ್ಲಾ ಬೆಂಬಲಿತ ಪಕ್ಷಗಳು ಸೇರುವ ಸಾಧ್ಯತೆಯಿದೆ.
ಎಲ್ಲಾ ಎನ್‌ಡಿಎಯೇತರ ಪಕ್ಷಗಳು ತಮ್ಮ ಶಾಸಕರನ್ನು ಪಾಟ್ನಾಕ್ಕೆ ಕರೆದಿದ್ದು, ಹೊಸ ಸರ್ಕಾರವನ್ನು ಬೆಂಬಲಿಸಲು ಔಪಚಾರಿಕ ಅನುಮೋದನೆಯನ್ನು ಅವರಿಂದ ಪಡೆಯಲಾಗುತ್ತಿದೆ. ಬಿಹಾರದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಕ್ತ ಚರಣ್ ದಾಸ್ ಅವರು ಪಾಟ್ನಾಗೆ ಬಂದಿದ್ದಾರೆ. ಮಂಗಳವಾರ ಪಾಟ್ನಾದಲ್ಲಿ ನಡೆಯಲಿರುವ ತನ್ನ ಸಂಸದರು ಮತ್ತು ಶಾಸಕರ ಸಭೆಯ ನಂತರ ಬಿಜೆಪಿಯೊಂದಿಗಿನ ಮೈತ್ರಿಯನ್ನು ಮುರಿದುಕೊಳ್ಳುವ ಔಪಚಾರಿಕ ಘೋಷಣೆಯನ್ನು ಜೆಡಿಯು ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಿಹಾರದಲ್ಲಿ ಅನಿಶ್ಚಿತತೆಯಲ್ಲಿ ಎನ್‌ಡಿಎ ಭವಿಷ್ಯ, ಜೆಡಿಯು ಸಭೆಗೂ ಮುನ್ನ ಬಿಜೆಪಿ ಎಚ್ಚರಿಕೆಯ ಹೆಜ್ಜೆ
ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅವರು ಬಿಜೆಪಿಯನ್ನು ಹೆಸರಿಸದೆ ದಾಳಿ ಮಾಡುವ ಮೂಲಕ ಬಿಹಾರದ ರಾಜಕೀಯವು ಭಾನುವಾರ ನಿರ್ಣಾಯಕ ತಿರುವು ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಗಳನ್ನು ಸೋಲಿಸಲು ಈ ಹಿಂದೆ ಪ್ರಯತ್ನಗಳು ನಡೆದಿವೆ ಎಂದು ಸಿಂಗ್ ಹೇಳಿದ್ದಾರೆ.