ಹೆಚ್ಚು ವೇಗವಾಗಿ ಹರಡಬಲ್ಲ ಕೊರೊನಾ ವೈರಾಣು ರೂಪಾಂತರ ಓಮೈಕ್ರಾನ್‌ನ ಉಪತಳಿ ದೆಹಲಿಯಲ್ಲಿ ಪತ್ತೆ!
ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ (ಎಲ್‌ಎನ್‌ಜೆಪಿ) ವಂಶವಾಹಿ ಸಂರಚನೆ ವಿಶ್ಲೇಷಣೆಗಾಗಿ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಲಾಗಿದ್ದ ಮಾದರಿಗಳಲ್ಲಿ ಕೊರೊನಾ ವೈರಸ್‌ನ ರೂಪಾಂತರವಾದ ಓಮೈಕ್ರಾನ್‌ನ ಹೊಸ ಉಪತಳಿ ಪತ್ತೆಯಾಗಿದೆ ಎಂದು ಆಸ್ಪತ್ರೆಯ ಉನ್ನತ ವೈದ್ಯಾಧಿಕಾರಿ ತಿಳಿಸಿದ್ದಾರೆ.
Published: 10th August 2022 04:39 PM | Last Updated: 10th August 2022 04:39 PM | A+A A-

ಪ್ರಾತಿನಿಧಿಕ ಚಿತ್ರ
ನವದೆಹಲಿ: ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ (ಎಲ್‌ಎನ್‌ಜೆಪಿ) ವಂಶವಾಹಿ ಸಂರಚನೆ ವಿಶ್ಲೇಷಣೆಗಾಗಿ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಲಾಗಿದ್ದ ಮಾದರಿಗಳಲ್ಲಿ ಕೊರೊನಾ ವೈರಸ್‌ನ ರೂಪಾಂತರವಾದ ಓಮೈಕ್ರಾನ್‌ನ ಹೊಸ ಉಪತಳಿ ಪತ್ತೆಯಾಗಿದೆ ಎಂದು ಆಸ್ಪತ್ರೆಯ ಉನ್ನತ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಪರೀಕ್ಷೆಗೆ ಕಳುಹಿಸಲಾಗಿದ್ದ ಹಲವು ಮಾದರಿಗಳಲ್ಲಿ ಓಮೈಕ್ರಾನ್‌ನ ಉಪತಳಿಯಾದ BA 2.75 ಪತ್ತೆಯಾಗಿದೆ ಎಂದು ಎಲ್‌ಎನ್‌ಜೆಪಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಸುರೇಶ್ ಕುಮಾರ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿ 100 ಪರೀಕ್ಷೆಗಳಲ್ಲಿ ಹಲವು ಜನರಿಗೆ ಪಾಸಿಟಿವ್ ಆಗುತ್ತಿರುವುದು ಕಂಡುಬರುತ್ತಿದೆ. ವೇಗವಾಗಿ ಪಾಸಿಟಿವಿಟಿ ದರ ಕೂಡ ಏರಿಕೆಯಾಗುತ್ತಿದೆ. ಹೀಗಾಗಿ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಮಧ್ಯೆ ವೇಗವಾಗಿ ಹರಡುವ ಓಮೈಕ್ರಾನ್‌ನ ಹೊಸ ಉಪತಳಿ ಪತ್ತೆಯಾಗಿದೆ ಎಂದು ವೈದ್ಯಕೀಯ ನಿರ್ದೇಶಕರು ತಿಳಿಸಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಓಮೈಕ್ರಾನ್‌ನ ಉಪತಳಿಯು ವೇಗವಾಗಿ ಹರಡುತ್ತದೆ ಮತ್ತು ಹಿಂದಿನ ಸೋಂಕು ಹಾಗೂ ಲಸಿಕೆಯ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಡಾ. ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾ ಏರಿಳಿತ: ಬೆಂಗಳೂರು 1,098 ಸೇರಿ 1,608 ಹೊಸ ಪ್ರಕರಣ ಪತ್ತೆ; 2 ಸಾವು
'ಓಮೈಕ್ರಾನ್‌ನ ಉಪ-ತಳಿ ಬಿಎ 2.75 ವರದಿಯಲ್ಲಿ ಕಂಡುಬಂದಿದೆ. ಇದು ಹೆಚ್ಚು ಪ್ರಸರಣ ದರವನ್ನು ಹೊಂದಿದೆ. ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾದ 90 ಮಾದರಿಗಳ ಅಧ್ಯಯನ ವರದಿಯಲ್ಲಿ ಈ ವಿಚಾರ ಹೊರಹೊಮ್ಮಿದೆ. ಈ ಹೊಸ ಉಪ-ತಳಿಯು ಈಗಾಗಲೇ ಲಸಿಕೆಯನ್ನು ತೆಗೆದುಕೊಂಡು ಪ್ರತಿಕಾಯಗಳನ್ನು ಹೊಂದಿರುವ ಜನರ ಮೇಲೆ ಕೂಡ ದಾಳಿ ಮಾಡುತ್ತದೆ' ಎಂದು ಡಾ. ಕುಮಾರ್ ಹೇಳಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಆದಾಗ್ಯೂ, ಸದ್ಯ ವರದಿಯಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಸೋಂಕಿನ ತೀವ್ರತೆಯು ಕಡಿಮೆಯಿದೆ. ವಯಸ್ಸಾದವರು ಮತ್ತು ಈಗಾಗಲೇ ಇತರೆ ರೋಗಗಳನ್ನು ಹೊಂದಿರುವವರಿಗೆ ಅಪಾಯ ಹೆಚ್ಚು ಎಂದು ಅವರು ಹೇಳಿದರು.
ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 2,445 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದು ಫೆಬ್ರವರಿ 6 ರಿಂದೀಚೆಗೆ ಅತ್ಯಧಿಕವಾಗಿದೆ. ಪಾಸಿಟಿವಿಟಿ ಪ್ರಮಾಣವು ಶೇ 15.41ಕ್ಕೆ ಏರಿದೆ ಮತ್ತು ಏಳು ಜನರು ಸಾವಿಗೀಡಾಗಿದ್ದಾರೆ.