
ತೇಜಸ್ವಿ ಯಾದವ್
ಪಾಟ್ನಾ: ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ 'ಝಡ್ ಪ್ಲಸ್' ಭದ್ರತೆ ಒದಗಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಗುರುವಾರ ಈ ಕುರಿತು ಸುತ್ತೋಲೆ ಹೊರಡಿಸಲಾಗಿದ್ದು, ಆರ್‌ಜೆಡಿ ನಾಯಕ, ಡಿಸಿಎಂ ತೇಜಸ್ವಿ ಯಾದವ್ ಭದ್ರತೆಯಲ್ಲಿ ಬಿಹಾರ ವಿಶೇಷ ಸಶಸ್ತ್ರ ಪೊಲೀಸ್(ಬಿಎಸ್‌ಎಪಿ) ಕಮಾಂಡೋಗಳು ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿಹಾರ ಪೊಲೀಸ್ ಮಹಾನಿರ್ದೇಶಕರಿಗೆ(ಡಿಜಿಪಿ) ಕಳುಹಿಸಲಾದ ಸುತ್ತೋಲೆಯಲ್ಲಿ, “ತೇಜಸ್ವಿ ಯಾದವ್‌ಗೆ ಝಡ್ ಪ್ಲಸ್ ಭದ್ರತೆ ಒದಗಿಸುವ ನಿರ್ಧಾರವನ್ನು ರಾಜ್ಯ ಭದ್ರತಾ ಸಮಿತಿ ತೆಗೆದುಕೊಂಡಿದೆ” ಎಂದು ಹೇಳಲಾಗಿದೆ.
ಇದನ್ನು ಓದಿ: ಇದು ನಿಜವಾದ 'ಮಹಾಘಟಬಂಧನ್'; ಡೀಲ್ ಅಲ್ಲ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್
ತೇಜಸ್ವಿ ಯಾದವ್ ಅವರಿಗೆ ಬುಲೆಟ್ ಪ್ರೂಫ್ ಕಾರನ್ನೂ ಒದಗಿಸಲಾಗಿದೆ.
"ಝಡ್-ಪ್ಲಸ್' ಭದ್ರತೆಯು ಪೈಲಟ್, ಬೆಂಗಾವಲು, ನಿಕಟ ರಕ್ಷಣಾ ತಂಡ, ಗೃಹರಕ್ಷಕ, ಶೋಧ ಮತ್ತು ತಪಾಸಣೆ ಸಿಬ್ಬಂದಿಗಳನ್ನು ಒಳಗೊಂಡಿರುತ್ತದೆ. ಅಲ್ಲದೆ ಇತರೆ ಹಲವು ಭದ್ರತಾ ಸಿಬ್ಬಂದಿ ಮತ್ತು ಬಿಎಸ್‌ಎಪಿ ಸಶಸ್ತ್ರ ಕಮಾಂಡೋಗಳಿರುತ್ತಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯಪಾಲ ಫಾಗು ಚೌಹಾಣ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೂ 'ಝಡ್ ಪ್ಲಸ್' ಭದ್ರತೆ ಒದಗಿಸಲಾಗಿದೆ.