ರಕ್ಷಾ ಬಂಧನ ಆಚರಿಸಲೆಂದು ಸೋದರಿ ಮನೆಗೆ ಹೋಗುತ್ತಿದ್ದವನ ಕುತ್ತಿಗೆ ಸೀಳಿದ ಚೈನೀಸ್ ಮಾಂಜಾ!
ರಕ್ಷಾ ಬಂಧನವನ್ನು ಆಚರಿಸಲು ಮನೆಗೆ ಹೋಗುತ್ತಿದ್ದಾಗ ಚೈನೀಸ್ ಮಾಂಜಾದಿಂದ (ಚೈನೀಸ್ ಮಾಂಜಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಗಾಜಿನ ಹೊದಿಕೆಯ ಗಾಳಿಪಟದ ದಾರ) ಕುತ್ತಿಗೆ ಸೀಳಿ 34 ವರ್ಷದ ವ್ಯಕ್ತಿಯೊಬ್ಬರು ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
Published: 13th August 2022 02:57 PM | Last Updated: 13th August 2022 03:48 PM | A+A A-

ವಿಪಿನ್ ಕುಮಾರ್
ನವದೆಹಲಿ: ರಕ್ಷಾ ಬಂಧನವನ್ನು ಆಚರಿಸಲು ಮನೆಗೆ ಹೋಗುತ್ತಿದ್ದಾಗ ಚೈನೀಸ್ ಮಾಂಜಾದಿಂದ (ಚೈನೀಸ್ ಮಾಂಜಾ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಗಾಜಿನ ಹೊದಿಕೆಯ ಗಾಳಿಪಟದ ದಾರ) ಕುತ್ತಿಗೆ ಸೀಳಿ 34 ವರ್ಷದ ವ್ಯಕ್ತಿಯೊಬ್ಬರು ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ. .
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಮುಂಡ್ಕಾದ ರಾಜಧಾನಿ ಪಾರ್ಕ್‌ನ ನಿವಾಸಿ ವಿಪಿನ್ ಕುಮಾರ್ ಎಂಬಾತ ತನ್ನ ಪತ್ನಿ ಮತ್ತು ಮಗಳೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರು ಉತ್ತರ ಪ್ರದೇಶದ ಲೋನಿಯಲ್ಲಿರುವ ಅವರ ಅತ್ತೆಯ ಮನೆಗೆ ಹೋಗುತ್ತಿದ್ದರು. ಈ ವೇಳೆ ಐಎಸ್‌ಬಿಟಿ-ಸೀಲಂಪುರ್ ಕ್ಯಾರೇಜ್‌ವೇಯಲ್ಲಿ ಶಾಸ್ತ್ರಿ ಪಾರ್ಕ್ ಫ್ಲೈಓವರ್ ಅನ್ನು ತಲುಪಿದಾಗ, ಚೈನೀಸ್ ಮಾಂಜಾ ಸವಾರನ ಕುತ್ತಿಗೆಯಲ್ಲಿ ಸಿಲುಕಿಕೊಂಡಿತು. ಈ ವೇಳೆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದರು.
ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಣಿ–ಪಕ್ಷಿಗಳಿಗೆ ಮತ್ತು ಮನುಷ್ಯರ ಜೀವಕ್ಕೆ ಅಪಾಯ ತರಬಲ್ಲ ಗಾಳಿಪಟ ಹಾರಿಸಲು ಬಳಸುವ ಗಾಜಿನ ಪುಡಿ ಲೇಪಿತ ‘ಮಾಂಜಾ’ ದಾರ ಬಳಕೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) 2017 ರಲ್ಲಿ ನಿಷೇಧಿಸಿತ್ತು.
ವಿಪಿನ್ ಅವರ ಸೋದರಳಿಯ ರವಿಕುಮಾರ್ ಮಾತನಾಡಿ, 'ಮಾಂಜಾದ ಹೊಡೆತಕ್ಕೆ ಚಿಕ್ಕಪ್ಪನ ಕುತ್ತಿಗೆಗೆ ಆಳವಾದ ಗಾಯವಾಗಿದೆ. ಅವರ ಹಿಂದೆಯೇ ಇದ್ದ ಆಂಬ್ಯುಲೆನ್ಸ್, ಚಿಕ್ಕಪ್ಪನನ್ನು ಟ್ರಾಮಾ ಸೆಂಟರ್‌ಗೆ ಕರೆದೊಯ್ದಿತ್ತು. ನಾವು ಅಲ್ಲಿಗೆ ತಲುಪುವಷ್ಟರಲ್ಲೇ ಅವರು ಮೃತಪಟ್ಟಿರುವುದು ತಿಳಿಯಿತು. ದಾರವು ತುಂಬಾ ಹರಿತವಾಗಿದ್ದರಿಂದ ಅವರ ಕುತ್ತಿಗೆ ಸೀಳಿತ್ತು' ಎಂದು ತಿಳಿಸಿದರು.
'ನನ್ನ ಚಿಕ್ಕಪ್ಪನಿಗೆ ಬ್ರೆಡ್ ಸರಬರಾಜು ಮಾಡುವ ಕೆಲಸವಿತ್ತು. ಕಳೆದ ಏಳೆಂಟು ತಿಂಗಳಿಂದ ಅವರು ಬ್ರೆಡ್ ಸರಬರಾಜು ಮಾಡುತ್ತಿದ್ದರು. ಅವರಿಗೆ ಹೆಂಡತಿ ಮತ್ತು ಮೂವರು ಹೆಣ್ಣು ಮಕ್ಕಳು ಇದ್ದಾರೆ. ಅವರು ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು' ಎಂದು ರವಿ ಹೇಳಿದರು.