ಪ್ರಧಾನಿ ಮೋದಿಯವರು ಅಂದಿನ ಆಘಾತಕಾರಿ ಘಟನೆಗಳನ್ನು ರಾಜಕೀಯ ಕದನಗಳಿಗೆ ಮೇವಾಗಿ ಬಳಸುತ್ತಿದ್ದಾರೆ: ಕಾಂಗ್ರೆಸ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 14ನ್ನು ವಿಭಜನೆಯ ಕರಾಳ ಸಂಸ್ಮರಣಾ ದಿನವನ್ನಾಗಿ ಆಚರಿಸುತ್ತಿರುವ ನಿಜವಾದ ಉದ್ದೇಶವು ಆಘಾತಕಾರಿ ಘಟನೆಗಳನ್ನು ತಮ್ಮ ಪ್ರಸ್ತುತ ರಾಜಕೀಯ ಕದನಗಳಿಗೆ ಮೇವಾಗಿ ಬಳಸಿಕೊಳ್ಳುವುದಾಗಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.
Published: 14th August 2022 05:01 PM | Last Updated: 14th August 2022 05:01 PM | A+A A-

ಬಿಜೆಪಿ-ಕಾಂಗ್ರೆಸ್
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 14ನ್ನು ವಿಭಜನೆಯ ಕರಾಳ ಸಂಸ್ಮರಣಾ ದಿನವನ್ನಾಗಿ ಆಚರಿಸುತ್ತಿರುವ ನಿಜವಾದ ಉದ್ದೇಶವು ಆಘಾತಕಾರಿ ಘಟನೆಗಳನ್ನು ತಮ್ಮ ಪ್ರಸ್ತುತ ರಾಜಕೀಯ ಕದನಗಳಿಗೆ ಮೇವಾಗಿ ಬಳಸಿಕೊಳ್ಳುವುದಾಗಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ.
ವಿಭಜನೆಯ ದುರಂತವನ್ನು ದ್ವೇಷ ಮತ್ತು ಪೂರ್ವಾಗ್ರಹ ಪೀಡಿತರನ್ನಾಗಿ ಉತ್ತೇಜಿಸಲು ದುರುಪಯೋಗಪಡಿಸಿಕೊಳ್ಳಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
'ದ್ವೇಷದ ರಾಜಕಾರಣವನ್ನು ಸೋಲಿಸಲಾಗುವುದು ಮತ್ತು ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಪರಂಪರೆಯನ್ನು ಎತ್ತಿಹಿಡಿಯುವ ಮೂಲಕ ಭಾರತವನ್ನು ಒಂದುಗೂಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮುಂದುವರಿಸುತ್ತದೆ' ಎಂದು ಅವರು ಹೇಳಿದರು.
ಜನರ ಹೋರಾಟ ಮತ್ತು ತ್ಯಾಗ ಬಲಿದಾನಗಳ ನೆನಪಿಗಾಗಿ ಆಗಸ್ಟ್ 14ನ್ನು ವಿಭಜನೆಯ ಕರಾಳ ಸಂಸ್ಮರಣಾ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ಮೋದಿ ಕಳೆದ ವರ್ಷ ಘೋಷಿಸಿದ್ದರು.
ಲಕ್ಷ ಲಕ್ಷ ಜನರು ಸ್ಥಳಾಂತರಗೊಂಡರು ಮತ್ತು ಪ್ರಾಣ ಕಳೆದುಕೊಂಡರು. ಅವರ ತ್ಯಾಗವನ್ನು ಮರೆಯಬಾರದು ಅಥವಾ ಅಗೌರವ ತೋರಬಾರದು. ಈ ಹಿಂದಿರುವ ಸತ್ಯ ಏನೆಂದರೆ, ಎರಡು ದೇಶದ ಸಿದ್ಧಾಂತವನ್ನು ಸಾವರ್ಕರ್ ಹುಟ್ಟುಹಾಕಿದರು. ಜಿನ್ನಾ ಅದನ್ನು ಪರಿಪೂರ್ಣಗೊಳಿಸಿದರು. 'ನಾವು ವಿಭಜನೆಯನ್ನು ಒಪ್ಪಿಕೊಳ್ಳದಿದ್ದರೆ, ಭಾರತವು ಅನೇಕ ಭಾಗಗಳಾಗಿ ವಿಭಜನೆಯಾಗುತ್ತಿತ್ತು ಮತ್ತು ಸಂಪೂರ್ಣವಾಗಿ ನಾಶವಾಗುತ್ತಿತ್ತು ಎಂದು ನನಗನಿಸುತ್ತಿದೆ' ಎಂದು ಸರ್ದಾರ್ ಪಟೇಲ್ ಬರೆದಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಆ.14 ದೇಶ 'ವಿಭಜನೆಯ ಕರಾಳ ದಿನ' ಎಂದು ಬಿಜೆಪಿ ವಿಡಿಯೊ ಬಿಡುಗಡೆ: ಕಾಂಗ್ರೆಸ್ ತಿರುಗೇಟು
ಶರತ್ ಚಂದ್ರ ಬೋಸ್ ಅವರ ಆಶಯಕ್ಕೆ ವಿರುದ್ಧವಾಗಿ ಬಂಗಾಳದ ವಿಭಜನೆಯನ್ನು ಪ್ರತಿಪಾದಿಸಿದ ಮತ್ತು ವಿಭಜನೆಯ ದುರಂತದ ಪರಿಣಾಮಗಳ ಸಂದರ್ಭದಲ್ಲಿ ಸ್ವತಂತ್ರ ಭಾರತದ ಮೊದಲ ಸಚಿವ ಸಂಪುಟದಲ್ಲಿ ಕುಳಿತಿದ್ದ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರನ್ನು ಪ್ರಧಾನಿ ಇಂದು ನೆನಪಿಸಿಕೊಳ್ಳುತ್ತಾರೆಯೇ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
'ಇಂದಿನ ಆಧುನಿಕ ಸಾವರ್ಕರ್‌ಗಳು ಮತ್ತು ಜಿನ್ನಾಗಳು' ರಾಷ್ಟ್ರವನ್ನು ವಿಭಜಿಸಲು ತಮ್ಮ ಪ್ರಯತ್ನಗಳನ್ನು ಮುಂದುವರೆಸುತ್ತಿದ್ದಾರೆ ಎಂದು ಆರೋಪಿಸಿದ ರಮೇಶ್, ರಾಷ್ಟ್ರವನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ಅವಿರತರಾಗಿದ್ದ ಗಾಂಧಿ, ನೆಹರು, ಪಟೇಲ್ ಮತ್ತು ಅನೇಕರ ಪರಂಪರೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎತ್ತಿಹಿಡಿಯುತ್ತದೆ. ಧ್ವೇಷದ ರಾಜಕಾರಣವನ್ನು ಸೋಲಿಸಲಾಗುವುದು ಎಂದು ಅವರು ಹೇಳಿದರು.
1947 ರಲ್ಲಿ ಭಾರತ ವಿಭಜನೆಯಾದ ನಂತರ ಪಾಕಿಸ್ತಾನವೂ ಪ್ರತ್ಯೇಕ ರಾಷ್ಟ್ರವಾಗಿ ರೂಪುಗೊಂಡಿತು. ನಂತರ ನಡೆದ ಕೋಮುಗಲಭೆಯಲ್ಲಿ ಲಕ್ಷಾಂತರ ಜನರು ಸ್ಥಳಾಂತರಗೊಂಡರು ಮತ್ತು ಅವರಲ್ಲಿ ಅನೇಕ ಲಕ್ಷ ಜನರು ಪ್ರಾಣ ಕಳೆದುಕೊಂಡರು.