ಕೇಂದ್ರವು 'ರಹಸ್ಯವಾಗಿ' ರೋಹಿಂಗ್ಯಾಗಳಿಗೆ ಸಹಾಯ ಮಾಡಿದೆ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ 'ಖಾಯಂ ನಿವಾಸ' ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 'ರಹಸ್ಯವಾಗಿ' ಪ್ರಯತ್ನಿಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಆರೋಪಿಸಿದ್ದಾರೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ
Updated on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೋಹಿಂಗ್ಯಾ ನಿರಾಶ್ರಿತರಿಗೆ 'ಖಾಯಂ ನಿವಾಸ' ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 'ರಹಸ್ಯವಾಗಿ' ಪ್ರಯತ್ನಿಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬುಧವಾರ ಆರೋಪಿಸಿದ್ದಾರೆ. ಅಲ್ಲದೆ, ಇದು ದೆಹಲಿ ಸರ್ಕಾರದ ಪ್ರಸ್ತಾವನೆ ಎಂದಿದ್ದ ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

ರೋಹಿಂಗ್ಯಾಗಳನ್ನು ನಗರದಲ್ಲಿನ ಇಡಬ್ಲ್ಯುಎಸ್ ವರ್ಗದ ಫ್ಲಾಟ್‌ಗಳಿಗೆ ಸ್ಥಳಾಂತರಿಸುವ ಕ್ರಮವನ್ನು ಕೇಂದ್ರವು ಮೊದಲಿಗೆ ತನ್ನ 'ಸಾಧನೆ' ಎಂದು ಕರೆಯಿತು. ಆದರೆ, ಆಮ್ ಆದ್ಮಿ ಪಕ್ಷವು (ಎಎಪಿ) ಅದನ್ನು ವಿರೋಧಿಸಿದ ನಂತರ ಅದನ್ನು ದೆಹಲಿ ಸರ್ಕಾರದ ಮೇಲೆ ಆರೋಪ ಹೊರಿಸಲು ಪ್ರಾರಂಭಿಸಿತು ಎಂದಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಸೂಚನೆಯ ಮೇರೆಗೆ ಮತ್ತು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ನಗರದಲ್ಲಿ ರೋಹಿಂಗ್ಯಾಗಳಿಗೆ ಶಾಶ್ವತ ನಿವಾಸವನ್ನು ಒದಗಿಸುವ ನಿರ್ಧಾರವನ್ನು ದೆಹಲಿ ಪೊಲೀಸರು ಮತ್ತು ಕೆಲವು ಅಧಿಕಾರಿಗಳು ತೆಗೆದುಕೊಂಡಿದ್ದಾರೆ ಎಂದು ಸಿಸೋಡಿಯಾ ಯಾರ ಹೆಸರುಗಳನ್ನು ಹೇಳದೆ ಆರೋಪಿಸಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಗೃಹ ಸಚಿವರ ಗಮನಕ್ಕೆ ತರದೆಯೇ ಈ ಕುರಿತಾದ ಪ್ರಸ್ತಾವನೆಗೆ ಅನುಮೋದನೆ ಪಡೆಯಲು ಲೆಫ್ಟಿನೆಂಟ್ ಗವರ್ನರ್ ಸಕ್ಸೇನಾ ಅವರಿಗೆ ಕಳುಹಿಸುತ್ತಿದ್ದಾರೆ. ದೆಹಲಿಯಲ್ಲಿ ರೋಹಿಂಗ್ಯಾಗಳನ್ನು ಅಕ್ರಮವಾಗಿ ನೆಲೆಸುವಂತೆ ಮಾಡುವ ಈ 'ಸಂಚು' ಯಶಸ್ವಿಯಾಗಲು ಕೇಜ್ರಿವಾಲ್ ಸರ್ಕಾರ ಬಿಡುವುದಿಲ್ಲ ಎಂದು ಸಿಸೋಡಿಯಾ ಹೇಳಿದರು.

ರೋಹಿಂಗ್ಯಾ ನಿರಾಶ್ರಿತರನ್ನು ದೆಹಲಿಯ ಹೊರಭಾಗದಲ್ಲಿರುವ ಬಕ್ಕರ್‌ವಾಲಾದ ಅಪಾರ್ಟ್‌ಮೆಂಟ್‌ಗಳಿಗೆ ಸ್ಥಳಾಂತರಿಸಲಾಗುವುದು ಮತ್ತು ಅವರಿಗೆ ಮೂಲಭೂತ ಸೌಕರ್ಯಗಳು, ಪೊಲೀಸ್ ಭದ್ರತೆಯನ್ನು ಒದಗಿಸಲಾಗುವುದು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಬುಧವಾರ ಹೇಳಿದ್ದರು.

ಪುರಿ ಹೇಳಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಕೇಂದ್ರ ಗೃಹ ಸಚಿವಾಲಯ, ದೆಹಲಿ ಸರ್ಕಾರವು ರೋಹಿಂಗ್ಯಾಗಳನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ಪ್ರಸ್ತಾಪಿಸಿದೆ. ಆದರೆ, ಕಾನೂನಿನ ಪ್ರಕಾರ ರೋಹಿಂಗ್ಯಾ ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡುವವರೆಗೆ ಅವರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗುವುದು ಮತ್ತು ಸದ್ಯದ ವಾಸ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸಲು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿತು.

ಸಚಿವಾಲಯದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಸೋಡಿಯಾ, 'ಬೆಳಗ್ಗೆ ಈ ಸುದ್ದಿಯನ್ನು (ರೋಹಿಂಗ್ಯಾಗಳನ್ನು ಸ್ಥಳಾಂತರಿಸುವ ಬಗ್ಗೆ) ತನ್ನ ಸಾಧನೆ ಎಂದು ವಿವರಿಸಿದ ಕೇಂದ್ರ ಸರ್ಕಾರ, ಆಮ್ ಆದ್ಮಿ ಪಕ್ಷದ ವಿರೋಧದ ಬಳಿಕ ಈಗ ಆ ಜವಾಬ್ದಾರಿಯನ್ನು ದೆಹಲಿ ಸರ್ಕಾರದ ಮೇಲೆ ಹಾಕಲು ಪ್ರಾರಂಭಿಸಿದೆ ಎಂದು ದೂರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com