2024ರ ಚುನಾವಣೆ ನಂತರ ಜನರೇ ಬಿಜೆಪಿಗೆ ಲುಕ್ ಔಟ್ ನೋಟಿಸ್ ನೀಡುತ್ತಾರೆ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದು, 2024ರ ಸಾರ್ವತ್ರಿಕ ಚುನಾವಣೆ ನಂತರ ಜನರೇ 'ಬಿಜೆಪಿಗೆ ಲುಕ್‌ ಔಟ್ ನೋಟಿಸ್' ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ
Updated on

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದು, 2024ರ ಸಾರ್ವತ್ರಿಕ ಚುನಾವಣೆ ನಂತರ ಜನರೇ 'ಬಿಜೆಪಿಗೆ ಲುಕ್‌ ಔಟ್ ನೋಟಿಸ್' ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸಿದ ಅವರು, 'ಇಂದು ಯಾರ ವಿರುದ್ಧ ಸಿಬಿಐ 'ಲುಕ್ ಔಟ್ ನೋಟಿಸ್' ಹೊರಡಿಸಬೇಕು ಎಂದು ಪ್ರಧಾನಿ ಯೋಚಿಸುತ್ತಿರುವುದು ದುರದೃಷ್ಟಕರ. ಹೀಗಾಗಿ ಜನರೇ ಬಿಜೆಪಿಗೆ 'ಲುಕ್ ಔಟ್ ನೋಟಿಸ್' ನೀಡಲಿದ್ದಾರೆ ಎಂದು ಅವರು ಎಎನ್‌ಐ ಜೊತೆಗಿನ ಸಂವಾದದಲ್ಲಿ ಹೇಳಿದರು.

'ಹಣದುಬ್ಬರ ಮತ್ತು ನಿರುದ್ಯೋಗಕ್ಕೆ ಪರಿಹಾರ ನೀಡಿ ದೇಶವನ್ನು ನಂಬರ್ ಒನ್ ಮಾಡಲು ಕೆಲಸ ಮಾಡುವ ನಾಯಕನಿಗಾಗಿ ಇಂದು ದೇಶವು ಹುಡುಕುತ್ತಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರನ್ನು ಶೂನ್ಯ ಮಾಡುವ ಮೂಲಕ ಅವರು ಏನನ್ನು ಸಾಧಿಸಬಹುದು? ದೇಶಕ್ಕೆ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಯೋಚಿಸುವ ಪ್ರಧಾನಿಯ ಅಗತ್ಯವಿದೆ. ತಾವು ನೀಡಿರುವ ದೊಡ್ಡ ದೊಡ್ಡ ಭರವಸೆಗಳನ್ನು ಈಡೇರಿಸಿರುವ ಬಗ್ಗೆ ಪ್ರಶ್ನೆಗಳನ್ನು ಕೇಳಿ ಸಾರ್ವಜನಿಕರೇ 2024 ರಲ್ಲಿ ಅವರಿಗೆ 'ಲುಕ್ ಔಟ್ ನೋಟಿಸ್' ನೀಡಲಿದ್ದಾರೆ' ಎಂದು ಅವರು ಹೇಳಿದರು.

ಭಾರತದ ಸ್ಥಿತಿ 75 ವರ್ಷಗಳ ಹಿಂದೆ ಇದ್ದಂತೆಯೇ ಇದೆ ಎಂದ ಅವರು, 'ದೇಶವು ನಿರುದ್ಯೋಗಕ್ಕೆ ಪರಿಹಾರವನ್ನು ಹುಡುಕುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ. ಅರವಿಂದ್ ಕೇಜ್ರಿವಾಲ್ ಅವರು ಭಾರತವನ್ನು ನಂಬರ್ ಒನ್ ಮಾಡುವ ಮಾರ್ಗಗಳನ್ನು ಹುಡುಕುತ್ತಿರುವಾಗ, ಅವರು (ಪಿಎಂ ಮೋದಿ) ಈಗ ದಾಳಿ ನಡೆಸಲು ಸಿಬಿಐ ಮತ್ತು ಇ.ಡಿಯನ್ನು ಯಾರ ಮನೆಗೆ ಕಳುಹಿಸಬಹುದು ಎಂದು ಯೋಚಿಸುತ್ತಿದ್ದಾರೆ' ಎಂದು ದೂರಿದರು.

ಇದಕ್ಕೂ ಹಿಂದಿನ ದಿನ ತಮಗೆ ನೀಡಿದ್ದ ಲುಕ್ ಔಟ್ ನೋಟಿಸ್‌ ಬಗ್ಗೆ ಸಿಸೋಡಿಯಾ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ ಮತ್ತು ಸಿಬಿಐ ದಾಳಿಗಳನ್ನು 'ಗಿಮಿಕ್' ಎಂದು ಬಣ್ಣಿಸಿದ್ದಾರೆ.

'ನೀವು ಮಾಡಿರುವ ಎಲ್ಲಾ ದಾಳಿಗಳು ವಿಫಲವಾಗಿವೆ. ಈ ದಾಳಿಯಲ್ಲಿ ಒಂದು ಪೈಸೆಯೂ ಕೂಡ ಸಿಗದ ದುಷ್ಕೃತ್ಯ ಎದುರಾಗಿದೆ. ಈಗ ಮನೀಶ್ ಸಿಸೋಡಿಯಾ ತಲೆಮರೆಸಿಕೊಂಡಿದ್ದಾರೆ ಎಂದು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೀರಿ, ಇದೇನು ಗಿಮಿಕ್ ಮೋದಿ ಜೀ? ನಾನು ಬಹಿರಂಗವಾಗಿಯೇ ದೆಹಲಿಯಲ್ಲಿ ತಿರುಗಾಡುತ್ತಿದ್ದೇನೆ. ನಾನು ಎಲ್ಲಿಗೆ ಬರಬೇಕು ಹೇಳಿ?' ಎಂದು ಮೋದಿ ಅವರನ್ನು ಟೀಕಿಸಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರೆ 12 ಜನರ ಹೆಸರಿನಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡುವ ಮೂಲಕ ಕೇಂದ್ರದ ತನಿಖಾ ದಳವು ಅವರ ವಿದೇಶ ಪ್ರಯಾಣವನ್ನು ನಿರ್ಬಂಧಿಸಿದೆ.

ಪರಾರಿಯಾಗಿರುವ ಅಥವಾ ಕಾನೂನು ಜಾರಿ ಸಂಸ್ಥೆಗಳಿಗೆ ಬೇಕಾಗಿರುವ ವ್ಯಕ್ತಿಯು ದೇಶವನ್ನು ತೊರೆಯಲು ಸಾಧ್ಯವಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಲುಕ್ ಔಟ್ ನೋಟಿಸ್‌ ಅನ್ನು ನೀಡಲಾಗುತ್ತದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿನ ವಲಸೆ ಶಾಖೆಯಿಂದ ವಲಸೆ ಚೆಕ್‌ಪಾಯಿಂಟ್‌ಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಇತರೆ ರಾಜ್ಯಗಳ ಏಳು ಸ್ಥಳಗಳು ಸೇರಿದಂತೆ ದೆಹಲಿಯ 31 ಸ್ಥಳಗಲ್ಲಿ ಸಿಬಿಐ ದಾಳಿ ನಡೆಸಿತು. ಈ ವೇಳೆ ಇಬ್ಬರು ಆರೋಪಿಗಳು ಪತ್ತೆಯಾಗಿಲ್ಲ. ಆದ್ದರಿಂದ ಒಟ್ಟು 13 ಆರೋಪಿಗಳ ವಿರುದ್ಧ ತಕ್ಷಣವೇ ಜಾರಿಗೆ ಬರುವಂತೆ ಸಿಬಿಐ ಲುಕ್ ಔಟ್ ನೋಟಿಸ್ ನೀಡಲಾಗಿದೆ ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದ್ದಾರೆ.

ಕಳೆದ ವರ್ಷ ನವೆಂಬರ್‌ನಲ್ಲಿ ಜಾರಿಗೆ ತಂದಿದ್ದ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 14 ಜನರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸ ಸೇರಿದಂತೆ 31 ಸ್ಥಳಗಳಲ್ಲಿ ಶುಕ್ರವಾರ ದಾಳಿ ನಡೆಸಿದಾಗ  ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳ ಜೊತೆಗೆ ಬ್ಯಾಂಕ್ ವಹಿವಾಟುಗಳ ಪರಿಶೀಲನೆಯನ್ನು ನಡೆಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಂದಿನ ಅಬಕಾರಿ ಆಯುಕ್ತ ಅರ್ವಾ ಗೋಪಿ ಕೃಷ್ಣ, ಅಬಕಾರಿ ಇಲಾಖೆಯ ಅಂದಿನ ಉಪ ಆಯುಕ್ತ ಆನಂದ್ ತಿವಾರಿ ಮತ್ತು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ಪಂಕಜ್ ಭಟ್ನಾಗರ್ 2021-22ನೇ ಸಾಲಿನ ಅಬಕಾರಿ ನೀತಿಗೆ ಸಂಬಂಧಿಸಿದ ಶಿಫಾರಸು ಮಾಡುವಲ್ಲಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಸಿಬಿಐ ಆರೋಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com