ದೆಹಲಿ ಅಬಕಾರಿ ನೀತಿ ವಿವಾದ: ತನಿಖಾ ಸಂಸ್ಥೆಗಳ ದುರ್ಬಳಕೆ ಖಂಡಿಸಿ ನಿರ್ಣಯ ಅಂಗೀಕರಿಸಿದ ಆಮ್ ಆದ್ಮಿ ಪಕ್ಷ

ಆಮ್ ಆದ್ಮಿ ಪಕ್ಷದ ಉನ್ನತ ರಾಜಕೀಯ ಸಂಘಟನೆ, ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಬುಧವಾರ ಇ.ಡಿ ಮತ್ತು ಸಿಬಿಐ ದುರ್ಬಳಕೆ ಮತ್ತು ಆಪ್ ಶಾಸಕರಿಗೆ ಕೋಟಿಗಟ್ಟಲೆ ಹಣವನ್ನು ನೀಡುವ ಆಮಿಷವೊಡ್ಡಿರುವುದನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ.
ಎಎಪಿ ಲೋಗೋ
ಎಎಪಿ ಲೋಗೋ
Updated on

ನವದೆಹಲಿ: ಆಮ್ ಆದ್ಮಿ ಪಕ್ಷದ ಉನ್ನತ ರಾಜಕೀಯ ಸಂಘಟನೆ, ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಬುಧವಾರ ಇ.ಡಿ ಮತ್ತು ಸಿಬಿಐ ದುರ್ಬಳಕೆ ಮತ್ತು ಆಪ್ ಶಾಸಕರಿಗೆ ಕೋಟಿಗಟ್ಟಲೆ ಹಣವನ್ನು ನೀಡುವ ಆಮಿಷವೊಡ್ಡಿರುವುದನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದೆ.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗುರುವಾರ ಬೆಳಗ್ಗೆ 11 ಗಂಟೆಗೆ ಎಎಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು, ಈ ದಿಸೆಯಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನಲಾಗಿದೆ.

ಎಎಪಿ ಹಾಗೂ ಪಿಎಸಿ ಸದಸ್ಯ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮಾತನಾಡಿ, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಬೋಗಸ್ ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ ಅವರ ವಿರುದ್ಧ ಸಿಬಿಐ ದಾಳಿಗೆ ಆದೇಶಿಸಲಾಗಿದೆ ಎಂಬುದನ್ನು ಪಿಎಸಿ ಗಮನಿಸಿದೆ. ಪಿಎಸಿಗೆ ದೆಹಲಿ ಉಪಮುಖ್ಯಮಂತ್ರಿ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ವ್ಯಕ್ತಪಡಿಸಿದೆ. ದಾಳಿಯಲ್ಲಿ ಸಿಸೋಡಿಯಾ ವಿರುದ್ಧ ಏನನ್ನೂ ಪತ್ತೆಹಚ್ಚಲು ತನಿಖಾ ಸಂಸ್ಥೆ ವಿಫಲವಾಗಿರುವುದನ್ನೂ ಗಮನಿಸಿದೆ ಎಂದಿದ್ದಾರೆ.

'ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳನ್ನು ತೆಗೆದುಹಾಕಬೇಕೆಂದು ಬಯಸಿದರೆ, ಎಎಪಿಯನ್ನು ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಬಿಜೆಪಿ ಸಿಸೋಡಿಯಾ ಅವರಿಗೆ ಸಂದೇಶ ಕಳುಹಿಸಿದೆ. ಅಲ್ಲದೆ, ಎಎಪಿ ಸರ್ಕಾರದ ಪತನದ ನಂತರ ಸಿಸೋಡಿಯಾ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುವುದಾಗಿಯೂ ಹೇಳಿದೆ. ಬಿಜೆಪಿಯ ಈ ಆಫರ್ ಅನ್ನು ಸಿಸೋಡಿಯಾ ನಿರಾಕರಿಸಿದ ನಂತರ, ಬಿಜೆಪಿಯು ಹಲವಾರು ಎಎಪಿ ಶಾಸಕರನ್ನು ಸಂಪರ್ಕಿಸಿ 20 ಕೋಟಿ ನೀಡುವುದಾಗಿ ಆಮಿಷವೊಡ್ಡಿದೆ. ಬಿಜೆಪಿ ಸೇರಿ ಇಲ್ಲವೆ ಸಿಸೋಡಿಯಾ ಅವರಿಗೆ ಆಗುತ್ತಿರುವ ಕಿರುಕುಳ ಮತ್ತು ಬಂಧನವನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆಯೊಡ್ಡಿದೆ ಎಂಬುದನ್ನು ಪಿಎಸಿ ಗಮನಿಸಿದೆ ಎಂದರು.

ಪಿಎಸಿ ಸಭೆಯಲ್ಲಿ ಹಿರಿಯ ಸದಸ್ಯರು, 'ರಾಜ್ಯ ಸರ್ಕಾರವನ್ನು ಉರುಳಿಸಲು ಮತ್ತು ರಾಜಕೀಯ ನಾಯಕರ ವಿರುದ್ಧ ನಂತರ ಸಿಬಿಐ ಮತ್ತು ಇ.ಡಿಯನ್ನು ಕಳುಹಿಸುವ ಬದಲು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಮ್ಮ ಸಮಯವನ್ನು ವಿನಿಯೋಗಿಸಿ ಎಂದು ನಾವು ಪ್ರಧಾನಿಗೆ ಮನವಿ ಮಾಡುತ್ತೇವೆ' ಎಂದು ಹೇಳಿದರು.

'ಜನರು ಇಂದು ನಿರುದ್ಯೋಗ ಮತ್ತು ಹಣದುಬ್ಬರ ಎರಡರಿಂದಲೂ ಬಳಲುತ್ತಿದ್ದಾರೆ. ನೀವು ಜನಸಾಮಾನ್ಯರಿಂದ ಚುನಾಯಿತಗೊಂಡ ಸರ್ಕಾರಗಳನ್ನು ಅಸ್ಥಿರಗೊಳಿಸಲು ನಿಮ್ಮ ಎಲ್ಲಾ ಸಮಯವನ್ನು ವಿನಿಯೋಗಿಸುತ್ತಿದ್ದೀರಿ. ಶಾಸಕರನ್ನು ಖರೀದಿಸಲು ವ್ಯಯಿಸುತ್ತಿರುವ ಕೋಟ್ಯಂತರ ರೂಪಾಯಿ ಎಲ್ಲಿಂದ ಬರುತ್ತಿದೆ ಮತ್ತು ಇಷ್ಟೊಂದು ಹಣವನ್ನು ಹೇಗೆ ಸಂಗ್ರಹಿಸಲಾಗಿದೆ ಎಂದು ರಾಷ್ಟ್ರವು ತಿಳಿಯಲು ಬಯಸುತ್ತದೆ' ಎಂದು ಅವರು ಹೇಳಿದರು.

ಈಮಧ್ಯೆ, ದೆಹಲಿ ಬಿಜೆಪಿ ಬುಧವಾರ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ವಿಧಾನಸಭಾ ಕ್ಷೇತ್ರ ಪತ್ಪರ್‌ಗಂಜ್‌ನಲ್ಲಿ ತನ್ನ ಜನ್ ಚೌಪಾಲ್ ಪ್ರತಿಭಟನೆ ಪ್ರಾರಂಭಿಸಿದ್ದು, ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. 'ರಾಜಕೀಯವನ್ನು ಶುದ್ಧೀಕರಿಸಲು ಬಂದವರು ಮದ್ಯ ಹಗರಣದಲ್ಲಿ ಭಾಗಿಯಾಗಿರುವುದು 'ಶಾಕಿಂಗ್' ಎಂದು ಆರೋಪಿಸಿದರು.

'ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಒಬ್ಬ ಕಳಂಕಿತ ಶಾಸಕರನ್ನು ವಿಧಾನಸಭೆಯಲ್ಲಿ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳ ಹೊರತಾಗಿಯೂ, ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದ್ದಾರೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ ದೂರಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಕೇಸರಿ ಪಕ್ಷವು ಸೋಲದಂತೆ ನೋಡಿಕೊಳ್ಳಲು ಕೇಜ್ರಿವಾಲ್ ಅವರನ್ನು ತನ್ನ ಟ್ರ್ಯಾಕ್‌ನಲ್ಲಿ ನಿಲ್ಲಿಸಲು ಸಿಬಿಐನಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಎಎಪಿ ಬಿಜೆಪಿಗೆ ತಿರುಗೇಟು ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com