ರೈಲ್ವೆ ಉದ್ಯೋಗಕ್ಕಾಗಿ ಹೆಬ್ಬೆರಳಿನ ಚರ್ಮವನ್ನೇ ತೆಗೆದು ಸ್ನೇಹಿತನ ಕೈಗೆ ಹಾಕಿದ ಉದ್ಯೋಗಾಕಾಂಕ್ಷಿ; ಇಬ್ಬರ ಬಂಧನ

ಸರ್ಕಾರಿ ಉದ್ಯೋಗ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟವೇ. ಅದಕ್ಕಾಗಿ ನಾನಾ ಕಸರತ್ತು ಮಾಡುತ್ತಾರೆ. ಅದೇ ರೀತಿ ರೈಲ್ವೆ ಉದ್ಯೋಗ ಪಡೆಯಲು ಹಲವು ಬಾರಿ ಯತ್ನಿಸಿದ್ದ ಉದ್ಯೋಗಾಕಾಂಕ್ಷಿಯೊಬ್ಬರು ತಮ್ಮ ಹೆಬ್ಬೆರಳಿನ ಚರ್ಮವನ್ನು ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.
ಬಂಧನ
ಬಂಧನ

ವಡೋದರಾ: ಸರ್ಕಾರಿ ಉದ್ಯೋಗ ಅಂದ್ರೆ ಪ್ರತಿಯೊಬ್ಬರಿಗೂ ಇಷ್ಟವೇ. ಅದಕ್ಕಾಗಿ ನಾನಾ ಕಸರತ್ತು ಮಾಡುತ್ತಾರೆ. ಅದೇ ರೀತಿ ರೈಲ್ವೆ ಉದ್ಯೋಗ ಪಡೆಯಲು ಹಲವು ಬಾರಿ ಯತ್ನಿಸಿದ್ದ ಉದ್ಯೋಗಾಕಾಂಕ್ಷಿಯೊಬ್ಬರು ತಮ್ಮ ಹೆಬ್ಬೆರಳಿನ ಚರ್ಮವನ್ನು ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.

ಆಗಸ್ಟ್ 22ರಂದು ಗುಜರಾತ್‍ನ ವಡೋದರರಲ್ಲಿ ನಡೆದ ರೈಲ್ವೆ ನೇಮಕಾತಿ ಪರೀಕ್ಷೆಗೂ ಮುನ್ನ ಬಯೋಮೆಟ್ರಿಕ್ ಪರಿಶೀಲನೆ ವೇಳೆ ಪರೀರಕ್ಷಾ ಮೇಲ್ವಿಚಾರಕರು ಅಭ್ಯರ್ಥಿಯೊಬ್ಬರ ಕೈಗೆ ಸ್ಯಾನಿಟೈಜರ್ ಸಿಂಪಡಿಸಿದಾಗ ನಕಲು ಮಾಡಲು ಅಂಟಿಸಲಾಗಿದ್ದ ಹೆಬ್ಬೆರಳಿನ ಚರ್ಮವು ಉದುರಿಹೋಯಿತು ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಈ ಸಂಬಂಧ ವಡೋದರಾ ಪೊಲೀಸರು ಬಿಹಾರದ ಮುಂಗೇರ್ ಜಿಲ್ಲೆಯ ಅಭ್ಯರ್ಥಿ ಮುನೀಶ್ ಕುಮಾರ್ ಮತ್ತು ಆತನ ಸ್ನೇಹಿತ ರಾಜಗುರು ಗುಪ್ತಾನನನ್ನು ವಂಚನೆ ಮತ್ತು ನಕಲು ಮಾಡಲು ಯತ್ನಿಸಿದ್ದಕ್ಕಾಗಿ ಬುಧವಾರ ಬಂಧಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಎಂ. ವರೋಟಾರಿಯ ತಿಳಿಸಿದ್ದಾರೆ.

ಈ ಇಬ್ಬರೂ 20 ರ ವಯಸ್ಸಿನವರಾಗಿದ್ದು, ಈ ಹಿಂದೆ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು ಎಂದು ಅವರು ಹೇಳಿದರು.

ವಡೋದರದ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಪ್ರಕಾರ, ರೈಲ್ವೆಯಿಂದ ಅಧಿಕೃತಗೊಂಡ ಖಾಸಗಿ ಕಂಪನಿಯೊಂದು ಆ. 22 ರಂದು ಇಲ್ಲಿನ ಲಕ್ಷ್ಮಿಪುರ ಪ್ರದೇಶದ ಕಟ್ಟಡವೊಂದರಲ್ಲಿ ರೈಲ್ವೆ 'ಡಿ' ಗ್ರೂಪ್ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಯನ್ನು ನಡೆಸಿತ್ತು. ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು.

'ನಕಲು ಮಾಡುವುದನ್ನು ತಡೆಗಟ್ಟಲು, ಎಲ್ಲಾ ಅಭ್ಯರ್ಥಿಗಳು ತಮ್ಮ ಹೆಬ್ಬೆರಳಿನ ಗುರುತನ್ನು ನೀಡಬೇಕಾಗಿತ್ತು. ಹೀಗಾಗಿ ಪರೀಕ್ಷೆಗೂ ಮುನ್ನ ಬಯೋಮೆಟ್ರಿಕ್ ಸಾಧನದ ಮೂಲಕ ಅವರ ಆಧಾರ್ ಮಾಹಿತಿಯೊಂದಿಗೆ ಹೆಬ್ಬೆರಳಿನ ಗುರುತನ್ನು ಹೊಂದಾಣಿಕೆ ಮಾಡಲಾಗುತ್ತಿತ್ತು. ಆ ಸಮಯದಲ್ಲಿ, ಹಲವು ಪ್ರಯತ್ನಗಳ ಹೊರತಾಗಿಯೂ ಈ ಸಾಧನವು  ಮನೀಶ್ ಕುಮಾರ್ ಎಂದು ಅಭ್ಯರ್ಥಿಯ ಹೆಬ್ಬೆರಳಿನ ಗುರುತನ್ನು ನೋಂದಾಯಿಸಲು ವಿಫಲವಾಗಿತ್ತು.'

'ಅಭ್ಯರ್ಥಿ ತನ್ನ ಎಡಗೈಯನ್ನು ಪ್ಯಾಂಟ್‌ನ ಜೇಬಿನೊಳಗೆ ಇಟ್ಟು ಏನನ್ನೋ ಮರೆಮಾಚಲು ಪ್ರಯತ್ನಿಸುತ್ತಿರುವುದನ್ನು ಗಮನಿಸಿದ ಪರೀಕ್ಷಾ ಮೇಲ್ವಿಚಾರಕರಿಗೆ ಅನುಮಾನ ಬಂದಿತು. ಹೀಗಾಗಿ ಅವರು ಅಭ್ಯರ್ಥಿಯ ಎಡಗೈ ಹೆಬ್ಬೆರಳಿಗೆ ಸ್ಯಾನಿಟೈಸರ್ ಸಿಂಪಡಿಸಿದಾಗ, ಅದರ ಮೇಲೆ ಅಂಟಿಸಲಾದ ಚರ್ಮವು ಉದುರಿಹೋಯಿತು' ಎಂದು ಅಧಿಕಾರಿ ಹೇಳಿದರು.

ವಂಚನೆ ಬಗ್ಗೆ ತಿಳಿದ ಸಂಸ್ಥೆಯು ಪೊಲೀಸರಿಗೆ ಕರೆ ಮಾಡಿದೆ. ಈ ವೇಳೆ ಸಿಕ್ಕಿಬಿದ್ದ ವ್ಯಕ್ತಿ ತನ್ನ ನಿಜವಾದ ಹೆಸರು ರಾಜಗುರು ಗುಪ್ತ ಎಂದು ತಿಳಿಸಿದ್ದು, ತನ್ನ ಸ್ನೇಹಿತ ಮನೀಶ್ ಕುಮಾರ್ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗಲು ಬಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಗುಪ್ತಾ ಅಧ್ಯಯನದಲ್ಲಿ ಉತ್ತಮನಾಗಿದ್ದರಿಂದ, ರೈಲ್ವೆ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಮುನೀಶ್ ಕುಮಾರ್, ನಕಲಿ ಗುರುತಿನ ಮೂಲಕ ಗುಪ್ತಾನನ್ನು ನೇಮಕಾತಿ ಪರೀಕ್ಷೆಗೆ ಕಳುಹಿಸುವ ಆಲೋಚನೆ ಮಾಡಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

'ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಕುಮಾರ್ ತನ್ನ ಎಡಗೈ ಹೆಬ್ಬೆರಳನ್ನು ಬಿಸಿಯಾದ ಅಡುಗೆ ಪ್ಯಾನ್ ಮೇಲೆ ಹಾಕಿದ್ದಾನೆ. ಬಳಿಕ ಬ್ಲೇಡ್ ಅನ್ನು ಬಳಸಿ ಚರ್ಮವನ್ನು ತೆಗೆದು ಗುಪ್ತಾ ಅವರ ಎಡ ಹೆಬ್ಬೆರಳಿಗೆ ಅಂಟಿಸಿದ್ದಾನೆ. 'ನಾವು ಗುಪ್ತಾ ಮತ್ತು ಮುನೀಶ್ ಕುಮಾರ್ ಇಬ್ಬರನ್ನೂ ಬಂಧಿಸಿದ್ದೇವೆ" ಎಂದು ಅಧಿಕಾರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com