ಮೈತ್ರಿ ಕಡಿತ ಬೆನ್ನಲ್ಲೇ ಮೋದಿ ಸರ್ಕಾರಕ್ಕೆ ನಿತೀಶ್ ಗುದ್ದು; ಸಿಬಿಐಗೆ ಸಾಮಾನ್ಯ ಒಪ್ಪಿಗೆ ಹಿಂಪಡೆತಕ್ಕೆ ಬಿಹಾರ ಸರ್ಕಾರ ಚಿಂತನೆ
ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ಸರ್ಕಾರದಿಂದ ಹೊರಬಂದು ಆರ್ ಜೆಡಿ ಜೊತೆ ಸರ್ಕಾರ ರಚನೆ ಮಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ ಬಿಜೆಪಿಗೆ ಮತ್ತೊಂದು ಹೊಡೆತ ನೀಡಲು ಮುಂದಾಗಿದ್ದು, ಸಿಬಿಐ ಸಂಸ್ಥೆಗೆ ನೀಡಿರುವ ಸಾಮಾನ್ಯ ಒಪ್ಪಿಗೆ ಹಿಂಪಡೆತಕ್ಕೆ ಮುಂದಾಗಿದ್ದಾರೆ.
Published: 28th August 2022 08:44 PM | Last Updated: 28th August 2022 08:44 PM | A+A A-

ನಿತೀಶ್ ಕುಮಾರ್
ಪಾಟ್ನಾ: ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡು ಸರ್ಕಾರದಿಂದ ಹೊರಬಂದು ಆರ್ ಜೆಡಿ ಜೊತೆ ಸರ್ಕಾರ ರಚನೆ ಮಾಡಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಇದೀಗ ಬಿಜೆಪಿಗೆ ಮತ್ತೊಂದು ಹೊಡೆತ ನೀಡಲು ಮುಂದಾಗಿದ್ದು, ಸಿಬಿಐ ಸಂಸ್ಥೆಗೆ ನೀಡಿರುವ ಸಾಮಾನ್ಯ ಒಪ್ಪಿಗೆ ಹಿಂಪಡೆತಕ್ಕೆ ಮುಂದಾಗಿದ್ದಾರೆ.
ಹೌದು.. ಬಿಹಾರದ ಆಡಳಿತಾರೂಢ ಮಹಾಘಟಬಂಧನ್‌ನ ನಾಯಕರು ಭಾನುವಾರ ಕೇಂದ್ರೀಯ ತನಿಖಾ ದಳದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲು ಕರೆ ನೀಡಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ರಾಜಕೀಯ ಉದ್ದೇಶಗಳಿಗಾಗಿ ಸಂಸ್ಥೆಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಸಿಬಿಐಗೆ ನೀಡಿರುವ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದ ನಿತೀಶ್ ಕುಮಾರ್; ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ
ಒಂದು ವೇಳೆ ಬಿಹಾರ ಸರ್ಕಾರ ಈ ಒಪ್ಪಿಗೆಯನ್ನು ಹಿಂಪಡೆದಿದ್ದೇ ಆದರೆ, ಅದರಂತೆ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946 ರ ಸೆಕ್ಷನ್ 6 ರ ಪ್ರಕಾರ, ಸಿಬಿಐ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ತನಿಖೆಗಳನ್ನು ನಡೆಸಲು ಆಯಾ ರಾಜ್ಯ ಸರ್ಕಾರಗಳಿಂದ ಒಪ್ಪಿಗೆ ಪಡೆಯಬೇಕು. ಈಗಾಗಲೇ ಈ ಹಿಂದೆ ಪಶ್ಚಿಮ ಬಂಗಾಳ, ಛತ್ತೀಸ್‌ಗಢ, ರಾಜಸ್ಥಾನ, ಪಂಜಾಬ್ ಮತ್ತು ಮೇಘಾಲಯ ಸೇರಿದಂತೆ ಒಂಬತ್ತು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ತನಿಖೆ ಮಾಡಲು ಕೇಂದ್ರೀಯ ತನಿಖಾ ದಳಕ್ಕೆ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿವೆ. ಈ ಪಟ್ಟಿಗೆ ಇದೀಗ ಬಿಹಾರ ಕೂಡ ಸೇರುವ ಸಾಧ್ಯತೆ ಇದೆ.
ಬಿಜೆಪಿಯ ರಾಜಕೀಯ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳನ್ನು ಹೇಗೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ಬಿಹಾರದ ಮಹಾಮೈತ್ರಿಕೂಟ ಸರ್ಕಾರವು ಸಿಬಿಐಗೆ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯಬೇಕು ಎಂದು ಆರ್‌ಜೆಡಿ ನಾಯಕ ಶಿವಾನಂದ್ ತಿವಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಿಹಾರ: ರಾಜೀನಾಮೆ ನೀಡದ ವಿಧಾನಸಭಾ ಸ್ಪೀಕರ್ ವಿರುದ್ಧ 'ಅವಿಶ್ವಾಸ ನಿರ್ಣಯ' ಮಂಡಿಸಿದ ಆರ್ ಜೆಡಿ
ಇದಲ್ಲದೆ, ಕೇಂದ್ರೀಯ ಸಂಸ್ಥೆಗಳ ದುರುಪಯೋಗವನ್ನು ಪರಿಶೀಲಿಸಲು ನ್ಯಾಯಾಂಗವನ್ನು ಸಂಪರ್ಕಿಸಲು ರಾಜ್ಯ ಸರ್ಕಾರವು ತನಗಿರುವ ಆಯ್ಕೆಯನ್ನು ಅನ್ವೇಷಿಸಬೇಕು. ಎನ್‌ಡಿಎ ಆಡಳಿತದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ನಾನು ಹೇಳಲೇಬೇಕು ಎಂದು ಅವರು ಹೇಳಿದರು.
ಇದಕ್ಕೆ ಇಂಬು ನೀಡುವಂತೆ ಸಿಬಿಐಗೆ ನೀಡಿರುವ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆಯಲು ಇದು ಸರಿಯಾದ ಸಮಯ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಹೇಳಿದೆ.