ಪಕ್ಷದ ಪತನಕ್ಕೆ ರಾಹುಲ್ ಗಾಂಧಿ ಕಾರಣ ಎಂದು ರಾಜೀನಾಮೆ ನೀಡಿದ ತೆಲಂಗಾಣ ಕಾಂಗ್ರೆಸ್ ನಾಯಕ

ಕಾಂಗ್ರೆಸ್ ಪಕ್ಷದ ವ್ಯವಹಾರಗಳಿಂದ ನನ್ನನ್ನು ಬೇರ್ಪಡಿಸಿಕೊಳ್ಳುವುದನ್ನು ಹೊರತುಪಡಿಸಿ ನನಗೆ ಬೇರೆ ಆಯ್ಕೆಗಳಿರಲಿಲ್ಲ, ಈ ಮೂಲಕ ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ರಾಜ್ಯಸಭಾ ಮಾಜಿ ಸದಸ್ಯ ಎಂ.ಎ. ಖಾನ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಹೈದರಾಬಾದ್(ತೆಲಂಗಾಣ): ಕಾಂಗ್ರೆಸ್‌ಗೆ ಮತ್ತೊಂದು ಹಿನ್ನಡೆಯಾಗಿದ್ದು, ತೆಲಂಗಾಣದಲ್ಲಿ ಪಕ್ಷದ ನಾಯಕ ಎಂ.ಎ. ಖಾನ್ ಅವರು ಶನಿವಾರದಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಸಭಾ ಮಾಜಿ ಸದಸ್ಯ ಖಾನ್ ಅವರು ಕಾಂಗ್ರೆಸ್ ನಾಯಕತ್ವಕ್ಕೆ ಬರೆದ ಪತ್ರದಲ್ಲಿ, 'ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ತನ್ನ ಹಿಂದಿನ ಹಿರಿಮೆಯನ್ನು ಮರಳಿ ಪಡೆಯಲು ಮತ್ತು ದೇಶವನ್ನು ಮುನ್ನಡೆಸಲು ಸಾಧ್ಯ ಎಂದು ಸಾರ್ವಜನಿಕರನ್ನು ಮನವೊಲಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ' ಎಂದು ಹೇಳಿದ್ದಾರೆ.

ವಿದ್ಯಾರ್ಥಿ ದಿನಗಳಿಂದಲೂ ನಾನು ನಾಲ್ಕು ದಶಕಗಳಿಂದ ಪಕ್ಷದೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಹೇಳಿದರು.

'ಪಕ್ಷದ ಕಲ್ಯಾಣ ಮತ್ತು ಯೋಗಕ್ಷೇಮಕ್ಕಾಗಿ ಜಿ 23ನ ಹಿರಿಯ ನಾಯಕರು ಎತ್ತಿದ ಧ್ವನಿಯನ್ನು ಕಾಂಗ್ರೆಸ್ ನಾಯಕತ್ವವು ಭಿನ್ನಾಭಿಪ್ರಾಯವೆಂದು ಪರಿಗಣಿಸಿದೆ. ಆ ನಾಯಕರನ್ನು ನಂಬಿದ್ದರೆ ಮತ್ತು ಪಕ್ಷದ ಮರುಸ್ಥಾಪನೆಗಾಗಿ ಅವರ ನೋವು ಮತ್ತು ಸಂಕಟವನ್ನು ಅರ್ಥಮಾಡಿಕೊಂಡಿದ್ದರೆ ಈ ವಿಷಯಗಳು ವಿಭಿನ್ನವಾಗಿರುತ್ತಿದ್ದವು' ಎಂದು ಪತ್ರದಲ್ಲಿ ತಿಳಿಸಲಾಗಿದೆ.

'ಪಕ್ಷದ ತಳಮಟ್ಟದ ಕಾರ್ಯಕರ್ತರನ್ನು ಮತ್ತೆ ಸಕ್ರಿಯಗೊಳಿಸಲು ಮತ್ತು ಪಂಡಿತ್ ನೆಹರು, ಇಂದಿರಾಗಾಂಧಿ, ಸಂಜಯ್ ಗಾಂಧಿ ಜೀ ಮತ್ತು ರಾಜೀವ್ ಗಾಂಧಿ ಜೀ ಅವರ ನೇತೃತ್ವದಲ್ಲಿ ಪಕ್ಷವು ಪ್ರದರ್ಶಿಸಿದ ಅದೇ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ದೇಶ ಸೇವೆಯನ್ನು ಮುಂದುವರಿಸಲು ಉನ್ನತ ನಾಯಕತ್ವವು ಯಾವುದೇ ಪ್ರಯತ್ನಗಳನ್ನು ಮಾಡದ ಕಾರಣ ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಪರಿಸ್ಥಿತಿಯನ್ನು ಗಮನಿಸಿದರೆ ಪಕ್ಷದ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದನ್ನು ಬಿಟ್ಟು ನನಗೆ ಬೇರೆ ದಾರಿ ಇರಲಿಲ್ಲ' ಎಂ.ಎ ಖಾನ್ ಹೇಳಿದ್ದಾರೆ.

'ಆದ್ದರಿಂದ, ಕಾಂಗ್ರೆಸ್ ಪಕ್ಷದ ವ್ಯವಹಾರಗಳಿಂದ ನನ್ನನ್ನು ಬೇರ್ಪಡಿಸಿಕೊಳ್ಳುವುದನ್ನು ಹೊರತುಪಡಿಸಿ ನನಗೆ ಬೇರೆ ಆಯ್ಕೆಗಳಿರಲಿಲ್ಲ, ಈ ಮೂಲಕ ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಅವರು ಬರೆದಿದ್ದಾರೆ.

ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಖಾನ್, 'ರಾಹುಲ್ ಗಾಂಧಿ ಪಕ್ಷದ ಸಮಿತಿಯಲ್ಲಿ ಉಪಾಧ್ಯಕ್ಷ (ವಿಪಿ) ಸ್ಥಾನವನ್ನು ವಹಿಸಿಕೊಂಡಾಗ ಹಲವು ವಿಚಾರಗಳು ಹದಗೆಟ್ಟಿದ್ದರಿಂದ ಕಾಂಗ್ರೆಸ್ ತೊರೆದಿದ್ದೇನೆ ಎಂದು ತಿಳಿಸಿದ್ದಾರೆ.

'ನಾನು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ... ರಾಹುಲ್ ಗಾಂಧಿ ಅವರು ಪಕ್ಷದ ಸಮಿತಿಯ ಉಪಾಧ್ಯಕ್ಷ (ವಿಪಿ) ಹುದ್ದೆಯನ್ನು ನಿಭಾಯಿಸಿದ ನಂತರ ವಿಷಯಗಳು ಹದಗೆಡಲು ಪ್ರಾರಂಭಿಸಿದವು. ಅವರು ತಮ್ಮದೇ ಆದ ವಿಭಿನ್ನ ಚಿಂತನೆಯನ್ನು ಹೊಂದಿದ್ದಾರೆ. ಅದು ಬ್ಲಾಕ್ ಮಟ್ಟದಿಂದ ಬೂತ್ ಮಟ್ಟದವರೆಗೂ ಯಾವುದೇ ಸದಸ್ಯರೊಂದಿಗೆ ಹೊಂದಿಕೆಯಾಗುವುದಿಲ್ಲ' ಎಂದು ಕಾಂಗ್ರೆಸ್ ಮಾಜಿ ರಾಜ್ಯಸಭಾ ಸದಸ್ಯರು ಆರೋಪಿಸಿದ್ದಾರೆ.

'ಇದರ ಪರಿಣಾಮ ಕಾಂಗ್ರೆಸ್ ಪತನಕ್ಕೆ ಕಾರಣವಾಯಿತು. ದಶಕಗಳಿಂದ ಪಕ್ಷವನ್ನು ಬಲಪಡಿಸಿದ ಪಕ್ಷದ ಹಿರಿಯ ಸದಸ್ಯರೂ ಈಗ ಪಕ್ಷವನ್ನು ತೊರೆಯುವ ಹಂತಕ್ಕೆ ತಲುಪಿದ್ದಾರೆ. ಅವರಿಗೆ ಹಿರಿಯ ಸದಸ್ಯರೊಂದಿಗೆ ಹೇಗೆ ವರ್ತಿಸಬೇಕು ಎಂದು ತಿಳಿದಿಲ್ಲ' ಎಂದು ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಂ.ಎ ಖಾನ್ ಜೊತೆಗೆ ಹಲವಾರು ಉನ್ನತ ಮಟ್ಟದ ನಾಯಕರು ಈ ವರ್ಷ ಕಾಂಗ್ರೆಸ್ ತೊರೆದಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಬಲಿಷ್ಠ ನಾಯಕರನ್ನು ಹುಡುಕುವುದು ಕಾಂಗ್ರೆಸ್‌ಗೆ ಇದೀಗ ತಲೆನೋವಾಗಿ ಪರಿಣಮಿಸಿದೆ.

ಇದಕ್ಕೂ ಮುನ್ನ ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ರಾಷ್ಟ್ರವನ್ನು ಮತ್ತೆ ಒಂದುಗೂಡಿಸುವ ಗುರಿಯೊಂದಿಗೆ ಕಾಂಗ್ರೆಸ್ 'ಭಾರತ್ ಜೋಡೋ ಯಾತ್ರೆ'ಗೆ ಸಜ್ಜಾಗುತ್ತಿದ್ದು, ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ 148 ದಿನಗಳ ಪಾದಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಈ ಮಧ್ಯೆ ಹಿರಿಯ ನಾಯಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com