ನೋಯ್ಡಾದ ಅವಳಿ ಗೋಪುರ ನೆಲಸಮ: 500 ಕೋಟಿ ನಷ್ಟವಾಗಿದೆ ಎಂದ ಸೂಪರ್‌ಟೆಕ್ ಕಂಪನಿ

ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ ರಿಯಾಲ್ಟಿ ಸಂಸ್ಥೆಯಾದ ಸೂಪರ್‌ಟೆಕ್ ಲಿಮಿಟೆಡ್‌ಗೆ ನಿರ್ಮಾಣ ಮತ್ತು ಬಡ್ಡಿ ವೆಚ್ಚ ಸೇರಿದಂತೆ 500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಕೆ. ಅರೋರಾ ಭಾನುವಾರ ತಿಳಿಸಿದ್ದಾರೆ.
ನೆಲಸಮಗೊಂಡ ನೋಯ್ಡಾದ ಅವಳಿ ಗೋಪುರ
ನೆಲಸಮಗೊಂಡ ನೋಯ್ಡಾದ ಅವಳಿ ಗೋಪುರ

ನವದೆಹಲಿ: ನೋಯ್ಡಾದಲ್ಲಿ ನಿಯಮ ಬಾಹಿರವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಿದ ಕಾರಣ ರಿಯಾಲ್ಟಿ ಸಂಸ್ಥೆಯಾದ ಸೂಪರ್‌ಟೆಕ್ ಲಿಮಿಟೆಡ್‌ಗೆ ನಿರ್ಮಾಣ ಮತ್ತು ಬಡ್ಡಿ ವೆಚ್ಚ ಸೇರಿದಂತೆ 500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪನಿಯ ಅಧ್ಯಕ್ಷ ಆರ್.ಕೆ. ಅರೋರಾ ಭಾನುವಾರ ತಿಳಿಸಿದ್ದಾರೆ.

ಎಮರಾಲ್ಡ್ ಕೋರ್ಟ್ ಆವರಣದಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಮೇರೆಗೆ, ಸುಮಾರು 100 ಮೀಟರ್ ಎತ್ತರದ ಅವಳಿ ಗೋಪುರಗಳಾದ ಅಪೆಕ್ಸ್ ಮತ್ತು ಸೆಯಾನೆಗಳನ್ನು ಭಾನುವಾರ ಮಧ್ಯಾಹ್ನ 2.30ಕ್ಕೆ ಸ್ಫೋಟಕಗಳನ್ನು ಬಳಸಿ ನೆಲಕ್ಕುರುಳಿಸಲಾಗಿತ್ತು.

ಈ ಕಾರ್ಯಾಚರಣೆಯಲ್ಲಿ 3,700 ಕೆ.ಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಲಾಗಿದೆ. ಈ ಕಟ್ಟಡವನ್ನು ಕೆಡವಿದ ವೆಚ್ಚವೇ ಸುಮಾರು 20 ಕೋಟಿ ಎಂದು ಅಂದಾಜಿಸಲಾಗಿದೆ.

'ನಾವು ಭೂಮಿ ಮತ್ತು ನಿರ್ಮಾಣ ವೆಚ್ಚಕ್ಕಾಗಿ ಖರ್ಚು ಮಾಡಿದ ಮೊತ್ತ, ವಿವಿಧ ಅನುಮೋದನೆಗಳಿಗಾಗಿ ಅಧಿಕಾರಿಗಳಿಗೆ ಪಾವತಿಸಿದ ಶುಲ್ಕಗಳು, ವರ್ಷಗಳಿಂದ ಬ್ಯಾಂಕ್‌ಗಳಿಗೆ ಪಾವತಿಸಿದ ಬಡ್ಡಿ ಮತ್ತು ಈ ಎರಡು ಗೋಪುರಗಳಲ್ಲಿನ ಖರೀದಿದಾರರಿಗೆ ಪಾವತಿಸಿದ ಶೇ 12ರ ಬಡ್ಡಿ ಹಾಗೂ ಇತರ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡರೆ, ನಮ್ಮ ಒಟ್ಟಾರೆ ನಷ್ಟ ಸುಮಾರು 500 ಕೋಟಿ ರೂಪಾಯಿ ಆಗಿದೆ' ಎಂದು ಅರೋರಾ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ಅವಳಿ ಗೋಪುರಗಳು ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿನ ಸೆಕ್ಟರ್ 93 A ನಲ್ಲಿ ಸೂಪರ್‌ಟೆಕ್‌ನ ಎಮರಾಲ್ಡ್ ಕೋರ್ಟ್ ಯೋಜನೆಯ ಭಾಗವಾಗಿತ್ತು. ಎರಡು ಟವರ್‌ಗಳಲ್ಲಿರುವ 900ಕ್ಕೂ ಹೆಚ್ಚು

ಅಪಾರ್ಟ್‌ಮೆಂಟ್‌ಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ 700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
'ಈ ಎರಡು ಗೋಪುರಗಳ ಒಟ್ಟು ನಿರ್ಮಾಣ ಪ್ರದೇಶವು ಸುಮಾರು 8 ಲಕ್ಷ ಚದರ ಅಡಿಗಳಷ್ಟಿದೆ. ನಾವು ಈ ಗೋಪುರಗಳನ್ನು ನೋಯ್ಡಾ ಅಭಿವೃದ್ಧಿ ಪ್ರಾಧಿಕಾರವು ಅನುಮೋದಿಸಿದ ಕಟ್ಟಡದ ಯೋಜನೆಯ ಪ್ರಕಾರ ನಿರ್ಮಿಸಿದ್ದೇವೆ' ಎಂದು ಅವರು ಹೇಳಿದರು.

ಕಟ್ಟಡ ನೆಲಸಮ ಮಾಡುವ ವೆಚ್ಚದ ಬಗ್ಗೆ ಕೇಳಿದಾಗ, 'ಸೂಪರ್‌ಟೆಕ್ ಕಂಪನಿಯು ನೆಲಸಮ ಮಾಡಿರುವ ಎಡಿಫೈಸ್ ಇಂಜಿನಿಯರಿಂಗ್‌ ಕಂಪನಿಗೆ 17.5 ಕೋಟಿ ರೂಪಾಯಿ ಪಾವತಿಸುತ್ತಿದೆ. 100 ಕೋಟಿ ವಿಮಾ ರಕ್ಷಣೆಗಾಗಿ ಪ್ರೀಮಿಯಂ ಮೊತ್ತವನ್ನು ಒಳಗೊಂಡಂತೆ ಕಟ್ಟಡದ ರಚನೆಗಳನ್ನು ಸುರಕ್ಷಿತವಾಗಿ ಕೆಳಗಿಳಿಸುವ ಕಾರ್ಯವನ್ನು ಮಾಡಲಾಗಿದೆ. ಇದರ ಜೊತೆಗೆ, ನೆಲಸಮ ಮಾಡುವುದಕ್ಕೆ ಸಂಬಂಧಿಸಿದ ಹಲವಾರು ಇತರ ವೆಚ್ಚಗಳಿವೆ' ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com