ಶೋಪಿಯಾನ್ ಎನ್ಕೌಂಟರ್: 3 ಎಲ್ ಇಟಿ ಉಗ್ರರು ಹತ, ಶೋಧ ಕಾರ್ಯಾಚರಣೆ ಮುಂದುವರಿಕೆ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಭಾರತೀಯ ಸೇನೆ ಬುಧವಾರ ಮೂರು ಉಗ್ರರನ್ನು ಹೊಡೆದುರುಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿರುವ ಭಾರತೀಯ ಸೇನೆ ಬುಧವಾರ ಮೂರು ಉಗ್ರರನ್ನು ಹೊಡೆದುರುಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಸೇನೆ ಪಾಕಿಸ್ತಾನದ ನಿಷೇಧಿತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಮೂರು ಉಗ್ರರನ್ನು ಹೊಡೆದುರುಳಿಸಿದೆ. ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ನಾಗ್ಬಾಲ್ ಪ್ರಾಂತ್ಯದಲ್ಲಿ ಉಗ್ರರ ಇರುವಿಕೆ ಕುರಿತು ಮಾಹಿತಿ ಪಡೆದ ಸೇನೆ ಕೂಡಲೇ ಆ ಪ್ರದೇಶವನ್ನು ಸುತ್ತುವರೆಯಿತು. ಅಲ್ಲದೆ ಘಟನಾ ಪ್ರದೇಶದ ಸಂಪರ್ಕಿತ ರಸ್ತೆಗಳಲ್ಲಿ ನಾಕಾಬಂದಿ ಹಾಕಿ ಉಗ್ರರು ತಪ್ಪಿಸಿಕೊಳ್ಳದಂತೆ ಮಾಡಿ ಕಾರ್ಯಾಚರಣೆ ಆರಂಭಿಸಿತು.

ಸೇನೆ ಸುತ್ತುವರೆಯುತ್ತಿದ್ದಂತೆಯೇ ಎಚ್ಚೆತ್ತ ಉಗ್ರರು ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದು, ಈ ವೇಳೆ ಪ್ರತಿದಾಳಿ ನಡೆಸಿದ್ದ ಸೇನೆ ಇಂದು ಬೆಳಗ್ಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು. ಬಳಿಕವೂ ಕಾರ್ಯಾಚರಣೆ ಮುಂದುವರೆದು ಇಂದು ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿತು. ಆ ಮೂಲಕ ಶೋಪಿಯಾನ್ ಎನ್ಕೌಂಟರ್ ನಲ್ಲಿ ಒಟ್ಟಾರೆ ಮೂರು ಉಗ್ರರನ್ನು ಹೊಡೆದುರುಳಿಸಿದೆ. ಮೃತ ಉಗ್ರರೆಲ್ಲರೂ ಪಾಕಿಸ್ತಾನದ ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾಗೆ ಸೇರಿದವರು ಎನ್ನಲಾಗಿದೆ.

ಪ್ರಸ್ತುತ ನಾಗ್ಬಾಲ್ ಪ್ರದೇಶದಲ್ಲಿ ಕಾರ್ಯಾಚರಣೆ ಮತ್ತು ಶೋಧ ಕಾರ್ಯ ಮುಂದುವರೆದಿದೆ ಎಂದು ಸೇನೆ ಮಾಹಿತಿ ನೀಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com