ಜ್ಯೋತಿರಾದಿತ್ಯ ಸಿಂಧಿಯಾ 24 ಕ್ಯಾರೆಟ್ ವಂಚಕ, ಮರಳಿ ಪಕ್ಷಕ್ಕೆ ಸೇರಿಸಲ್ಲ: ಜೈರಾಮ್ ರಮೇಶ್

ಪಕ್ಷ ತೊರೆದ ನಂತರ "ಗೌರವಯುತವಾಗಿ ಮೌನ"ವಾಗಿರುವ ಕಪಿಲ್ ಸಿಬಲ್ ಅವರಂತಹ ನಾಯಕರಿಗೆ ಮರಳಿ ಪಕ್ಷ ಸೇರಲು ಅವಕಾಶ ನೀಡಬಹುದು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅಥವಾ ಹಿಮಂತ ಬಿಸ್ವಾ ಶರ್ಮಾ ಅವರಂತಹವರನ್ನು....
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ

ಅಗರ್ ಮಾಲ್ವಾ: ಪಕ್ಷ ತೊರೆದ ನಂತರ "ಗೌರವಯುತವಾಗಿ ಮೌನ"ವಾಗಿರುವ ಕಪಿಲ್ ಸಿಬಲ್ ಅವರಂತಹ ನಾಯಕರಿಗೆ ಮರಳಿ ಪಕ್ಷ ಸೇರಲು ಅವಕಾಶ ನೀಡಬಹುದು. ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಅಥವಾ ಹಿಮಂತ ಬಿಸ್ವಾ ಶರ್ಮಾ ಅವರಂತಹವರನ್ನು ಯಾವುದೇ ಕಾರಣಕ್ಕೂ ಮರಳಿ ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶುಕ್ರವಾರ ಹೇಳಿದ್ದಾರೆ.

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ "24 ಕ್ಯಾರೆಟ್ ವಂಚಕ" ಎಂದು ಕಾಂಗ್ರೆಸ್‌ನ ಮಾಧ್ಯಮ ಮುಖ್ಯಸ್ಥರಾಗಿರುವ ಜೈರಾಮ್ ರಮೇಶ್ ಅವರು ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ಬಂಡಾಯ ನಾಯಕರು ಕಾಂಗ್ರೆಸ್ ಗೆ ಹಿಂತಿರುಗಲು ಬಯಸಿದರೆ ಪಕ್ಷದ ನಿಲುವು ಏನು? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮೇಶ್, "ಕಾಂಗ್ರೆಸ್ ತೊರೆದ ನಾಯಕರನ್ನು ಮರಳಿ ಸ್ವಾಗತಿಸಬಾರದು ಎಂದು ನಾನು ಭಾವಿಸುತ್ತೇನೆ ಎಂದರು.

ಪಕ್ಷ ತೊರೆದವರು, ನಿಂದಿಸಿದವರು ಇದ್ದಾರೆ. ಹಾಗಾಗಿ ಅವರನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಬಾರದು. ಆದರೆ ಘನತೆಯಿಂದ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಹಾಗೂ ನಾಯಕತ್ವದ ಬಗ್ಗೆ ಗೌರವಯುತ ಮೌನ ತಾಳಿದವರನ್ನು ವಾಪಸ್ ಸೇರಿಸಿಕೊಳ್ಳಲು ಅವಕಾಶ ನೀಡಬಹುದು ಎಂದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಶುಕ್ರವಾರ ಮಧ್ಯ ಪ್ರದೇಶದ ಅಗರ ಮಾಲ್ವಾ ತಲುಪಿದ ಸಂದರ್ಭದಲ್ಲಿ ಮಾತನಾಡಿದ ರಮೇಶ್, "ಕೆಲವು ಕಾರಣಕ್ಕಾಗಿ ಪಕ್ಷವನ್ನು ತೊರೆದ ನನ್ನ ಮಾಜಿ ಸಹೋದ್ಯೋಗಿ ಮತ್ತು ಉತ್ತಮ ಸ್ನೇಹಿತ ಕಪಿಲ್ ಸಿಬಲ್ ಅವರನ್ನು ಮರಳಿ ಸೇರಿಸಿಕೊಳ್ಳುವ ಬಗ್ಗೆ ನಾನು ಯೋಚಿಸಬಹುದು. ಆದರೆ ಸಿಂಧಿಯಾ ಮತ್ತು ಹಿಮಂತ ಬಿಸ್ವಾ ಶರ್ಮಾ ಅವರಂತವರನ್ನು ಎಂದಿಗೂ ಸೇರಿಸಬಾರದು" ಎಂದಿದ್ದಾರೆ.

ಸಿಂಧಿಯಾ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ, ಮಧ್ಯ ಪ್ರದೇಶ ಮುಖ್ಯಮಂತ್ರಿ ಅಥವಾ ರಾಜ್ಯಸಭಾ ಸ್ಥಾನ ನೀಡಿದ್ದರೆ ಕಾಂಗ್ರೆಸ್ ತೊರೆಯುತ್ತಿದ್ದರೇ? ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್, "ಸಿಂಧಿಯಾ ಅವರು ಒಬ್ಬ `ಗದ್ದರ್' (ವಂಚಕ), ನಿಜವಾದ ಗದ್ದರ್ ಮತ್ತು 24 ಕ್ಯಾರೆಟ್ ಗದ್ದರ್" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಮಧ್ಯ ಪ್ರದೇಶ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರವಾಲ್ ಅವರು, ಸಿಂಧಿಯಾ ಅವರು "ಬಲವಾದ ಸಾಂಸ್ಕೃತಿಕ ಬೇರುಗಳನ್ನು ಹೊಂದಿರುವ 24 ಕ್ಯಾರೆಟ್ ದೇಶಭಕ್ತ" ಎಂದಿದ್ದಾರೆ.

"ಸಿಂಧಿಯಾ ಮತ್ತು ಶರ್ಮಾ ಇಬ್ಬರೂ ತಮ್ಮ ಕೆಲಸಕ್ಕೆ "24 ಕ್ಯಾರೆಟ್" ಬದ್ಧತೆಯನ್ನು ಹೊಂದಿದ್ದಾರೆ ಮತ್ತು ರಮೇಶ್ ಅವರ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ" ಎಂದು ಅಗರವಾಲ್ ತಿರುಗೇಟು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com