ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ತಿಹಾರ್ ಜೈಲಿನಲ್ಲಿ ಪೋಕ್ಸೋ ಅಪರಾಧಿಯಿಂದ ಒತ್ತಾಯಪೂರ್ವಕವಾಗಿ ರಾಜಾತಿಥ್ಯ!
ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜೈಲು ಪಾಲಾಗಿರುವ ದೆಹಲಿ ಸರ್ಕಾರದ ಸಚಿವ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ತಿಹಾರ್ ಜೈಲಿನಲ್ಲಿ ಒತ್ತಡ ಹೇರಿ ವಿಶೇಷ ಸೌಲಭ್ಯ ನೀಡುವಂತೆ ಹೇಳಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
Published: 02nd December 2022 09:15 AM | Last Updated: 02nd December 2022 01:43 PM | A+A A-

ಸತ್ಯೇಂದ್ರ ಜೈನ್
ನವದೆಹಲಿ: ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜೈಲು ಪಾಲಾಗಿರುವ ದೆಹಲಿ ಸರ್ಕಾರದ ಸಚಿವ ಆಪ್ ನಾಯಕ ಸತ್ಯೇಂದ್ರ ಜೈನ್ ಗೆ ತಿಹಾರ್ ಜೈಲಿನಲ್ಲಿ ಒತ್ತಡ ಹೇರಿ ವಿಶೇಷ ಸೌಲಭ್ಯ ನೀಡುವಂತೆ ಹೇಳಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಸತ್ಯೇಂದ್ರ ಜೈನ್ ಅವರಿಗೆ ವಿಶೇಷ ವಿವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ಕಳೆದ ಕೆಲ ತಿಂಗಳಿನಿಂದ ಬಿಜೆಪಿ ವಕ್ತಾರರು ಮತ್ತು ನಾಯಕರು ಸೇರಿದಂತೆ ಹಲವರು ಆರೋಪಿಸುತ್ತಾ ಬಂದಿದ್ದಾರೆ. ಅದಕ್ಕೆ ಪೂರಕವಾಗಿ ಜೈಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುತ್ತಿದ್ದಾರೆ.
ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಇಬ್ಬರು ಸೇರಿದಂತೆ ಕನಿಷ್ಠ 5 ಮಂದಿ ಕೈದಿಗಳಿಗೆ ತಿಹಾರ ಜೈಲಿನ ಆಡಳಿತ ಸಿಬ್ಬಂದಿ ಸತ್ಯೇಂದ್ರ ಜೈನ್ ಅವರಿಗೆ ವಿಶೇಷ ಸೇವೆ ನೀಡುವಂತೆ ಒತ್ತಡ ಹೇರುತ್ತಾರೆ ಎಂದು ತನಿಖಾ ತಂಡವೊಂದು ಆರೋಪಿಸಿದೆ.
ಜೈಲಿನ ಅಧಿಕಾರಿಗಳೇ ಸತ್ಯೇಂದ್ರ ಜೈನ್ ಸೇವೆಯಲ್ಲಿ ನಿರತವಾಗಿದೆ ಎಂದು ಸಮಿತಿ ಒತ್ತಿ ಹೇಳಿದೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಹೊತ್ತಿರುವ ತಿಹಾರ್ ಕೈದಿ ರಿಂಕು ಸತ್ಯೇಂದ್ರ ಜೈನ್‌ಗೆ ಮಸಾಜ್ ಮಾಡಿದ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಗಿ ಕೆಲ ದಿನಗಳ ಹಿಂದೆ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. “ಜೈಲು ಅಧಿಕಾರಿಗಳ ಸೂಚನೆ ಮೇರೆಗೆ ನಾನು ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡಿದ್ದೇನೆ. ಈಗ ನನಗೆ ಬೆದರಿಕೆ ಹಾಕಲಾಗುತ್ತಿದೆ. ಮಸಾಜ್ ಮಾಡಲು ಸತ್ಯೇಂದ್ರ ಜೈನ್ ಅವರ ಕೋಣೆಯಿಂದ ನಾನು ಒಂದು ಹನಿ ನೀರನ್ನು ಕೂಡ ಬಳಸಲಿಲ್ಲ ಎಂದು ಕೈದಿ ರಿಂಕುವಿನ ತಪ್ಪೊಪ್ಪಿಗೆಯನ್ನು ಉಲ್ಲೇಖಿಸಿ ವರದಿ ಹೇಳಿದೆ.
ಇದನ್ನೂ ಓದಿ: ಜೈಲಿನೊಳಗೆ ಮಸಾಜ್, ಅದ್ದೂರಿ ಊಟದ ಬಳಿಕ ಸತ್ಯೇಂದ್ರ ಜೈನ್ ಸೆಲ್‌ನಲ್ಲಿ ಕ್ಲೀನಿಂಗ್ ಸೇವೆ: ವಿಡಿಯೋ ವೈರಲ್
ಸತ್ಯೇಂದ್ರ ಜೈನ್‌ಗೆ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ, ಎಎಪಿ ಅವರು ಚಿಕಿತ್ಸೆಯ ಭಾಗವಾಗಿ ಫಿಸಿಯೋಥೆರಪಿ ಪಡೆಯುತ್ತಿದ್ದಾರೆ ಎಂದು ಹೇಳಿಕೊಂಡಿದೆ. ಆದರೆ, ರಿಂಕು ಅವರು ಫಿಸಿಯೋಥೆರಪಿಯಲ್ಲಿ ಯಾವುದೇ ತರಬೇತಿ ಪಡೆದಿಲ್ಲ. ಮದುವೆ ಕಾರ್ಯಕ್ರಮಗಳಿಗೆ ಕುದುರೆ ಸವಾರಿ ಸೇವೆಗಳನ್ನು ಒದಗಿಸುವುದು ಅವರ ಮುಖ್ಯ ವೃತ್ತಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಸಾಜ್ ನನ್ನ ಸ್ವಂತ ಖುಷಿಯಿಂದ ಅಥವಾ ಪ್ರೀತಿ-ವಾತ್ಸಲ್ಯದಿಂದ ಮಾಡುತ್ತಿರುವುದು ಅಲ್ಲ. ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ಅದ್ದೂರಿ ಜೀವನಶೈಲಿಯನ್ನು ಹೊಂದಿದ್ದಾರೆ ಎಂದು ತನಿಖಾ ತಂಡ ಗಮನಿಸಿದೆ. ಇದೇ ವೇಳೆ, ಮತ್ತೊಬ್ಬ ಪೋಕ್ಸೋ ಅಪರಾಧಿ ಮನೀಶ್ ಜೈನ್‌ಗೆ ಹಣ್ಣುಗಳು ಮತ್ತು ಹೊರಗಿನ ಆಹಾರವನ್ನು ಒದಗಿಸುವಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. “ಜೈಲ್ ವಾರ್ಡನ್ ನನ್ನ ಜೈಲು ಖಾತೆ ಕಾರ್ಡ್‌ಗೆ ಹಣವನ್ನು ಜಮಾ ಮಾಡುತ್ತಿದ್ದರು.
ನನ್ನ ಕಾರ್ಡ್ ಬಳಸಿ, ನಾನು ಸತ್ಯೇಂದ್ರ ಜೈನ್‌ಗೆ ಜೈಲು ಕ್ಯಾಂಟೀನ್‌ನಿಂದ ಹಣ್ಣುಗಳನ್ನು ಖರೀದಿಸುತ್ತಿದ್ದೆ. ಅವರು ನನ್ನ ಜೈಲು ಖಾತೆ ಕಾರ್ಡ್‌ಗೆ 3-4 ಬಾರಿ ಹಣವನ್ನು ಕಳುಹಿಸಿದ್ದಾರೆ. ಪ್ರತಿ ಬಾರಿ ಅವರು 6,900 ರೂ.ಪಾಯಿಗಳನ್ನು ಹಾಕುತ್ತಿದ್ದರು. ನಾನು ಜೈನ್‌ಗೆ ಸ್ವಇಚ್ಛೆಯಿಂದ ಸೇವೆಗಳನ್ನು ನೀಡಲಿಲ್ಲ ಎಂದು ಮನೀಷ್ ಹೇಳಿರುವುದಾಗಿ ತನಿಖಾ ಸಮಿತಿ ವರದಿಯಲ್ಲಿ ಹೇಳಿದೆ.