ನೋಟ್ ಬ್ಯಾನ್ ಆರ್ಥಿಕ ನೀತಿಯ ವಿಷಯವಿರಬಹುದು, ಆದರೆ ನಿರ್ಧಾರದ ರೀತಿಯನ್ನು ಪರಿಶೀಲಿಸಬಹುದು: ಸುಪ್ರೀಂ
ನೋಟು ಅಮಾನ್ಯೀಕರಣ ನಿರ್ಧಾರ ಕೈಗೊಂಡ ರೀತಿಯನ್ನು ಪರಿಶೀಲಿಸುವ ಅಧಿಕಾರ ತನಗಿದೆ. ಆರ್ಥಿಕ ನೀತಿ ನಿರ್ಧಾರ ಎಂಬ ಕಾರಣಕ್ಕೆ ನ್ಯಾಯಾಂಗ ಕೈ ಕಟ್ಟಿ ಕುಳಿತುಕೊಳ್ಳಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
Published: 06th December 2022 11:55 PM | Last Updated: 07th December 2022 04:57 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ನೋಟು ಅಮಾನ್ಯೀಕರಣ ನಿರ್ಧಾರ ಕೈಗೊಂಡ ರೀತಿಯನ್ನು ಪರಿಶೀಲಿಸುವ ಅಧಿಕಾರ ತನಗಿದೆ. ಆರ್ಥಿಕ ನೀತಿ ನಿರ್ಧಾರ ಎಂಬ ಕಾರಣಕ್ಕೆ ನ್ಯಾಯಾಂಗ ಕೈ ಕಟ್ಟಿ ಕುಳಿತುಕೊಳ್ಳಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
2016ರಲ್ಲಿ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿವಿ ನಾಗರತ್ನ ಅವರನ್ನೊಳಗೊಂಡ ಪಂಚ ಪೀಠವು ಆರ್ಥಿಕ ನೀತಿ ನಿರ್ಧಾರಗಳಿಗೆ ನ್ಯಾಯಾಂಗ ಪರಿಶೀಲನೆ ಅನ್ವಯಿಸಲಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪರ ವಕೀಲರು ಹೇಳಿದಾಗ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿದೆ.
ವಿಚಾರಣೆ ವೇಳೆ ಆರ್‌ಬಿಐ ಪರ ವಾದ ಮಂಡಿಸಿದ ಹಿರಿಯ ವಕೀಲ ಜೈದೀಪ್ ಗುಪ್ತಾ, ಕಪ್ಪುಹಣ ಮತ್ತು ನಕಲಿ ಕರೆನ್ಸಿ ತಡೆಗೆ ನೋಟು ರದ್ದತಿ ನೀತಿಯ ಉದ್ದೇಶದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. 2016ರ ನೋಟು ಅಮಾನ್ಯೀಕರಣ ನೀತಿಯನ್ನು ಎತ್ತಿ ಹಿಡಿದಿರುವ ಹಿರಿಯ ವಕೀಲ ಗುಪ್ತಾ, ಹೇಳಲಾದ ಉದ್ದೇಶಗಳು ಮತ್ತು ನೋಟು ಅಮಾನ್ಯೀಕರಣದ ನಡುವೆ ಯಾವುದೇ ಸಂಬಂಧವಿದೆಯೇ ಎಂದು ಪರಿಶೀಲಿಸುವ ಮಟ್ಟಿಗೆ ಅನುಪಾತದ ತತ್ವವನ್ನು ಅನ್ವಯಿಸಬೇಕು ಎಂದು ಹೇಳಿದರು.
ನೋಟು ಅಮಾನ್ಯೀಕರಣವನ್ನು ಸಮರ್ಥಿಸಿಕೊಂಡ ವಕೀಲ ಗುಪ್ತಾ, ಆರ್ಥಿಕ ನೀತಿ ನಿರ್ಧಾರಗಳಿಗೆ ನ್ಯಾಯಾಂಗ ವಿಮರ್ಶೆಯನ್ನು ಅನ್ವಯಿಸಲಾಗುವುದಿಲ್ಲ ಎಂದು ಹೇಳಿದರು. ಇದಕ್ಕೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ನ್ಯಾಯಾಲಯವು ತೀರ್ಪಿನ ಅರ್ಹತೆಗೆ ಹೋಗುವುದಿಲ್ಲ, ಆದರೆ ನಿರ್ಧಾರವನ್ನು ತೆಗೆದುಕೊಂಡ ವಿಧಾನವನ್ನು ಪರಿಶೀಲಿಸಬಹುದು. ಇನ್ನು 'ಆರ್ಥಿಕ ನೀತಿ ನಿರ್ಧಾರ ಎಂಬ ಕಾರಣಕ್ಕೆ ನ್ಯಾಯಾಲಯ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ನೋಟು ಅಮಾನ್ಯೀಕರಣ: ಅಫಿಡವಿಟ್ಟು ಸಲ್ಲಿಸಲು ವಿಫಲವಾದ ಕೇಂದ್ರ ಸರ್ಕಾರ ವಿರುದ್ಧ ಸುಪ್ರೀಂ ಕೋರ್ಟ್ ಗರಂ
ಸುಮಾರು 5 ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ, 500 ಮತ್ತು 1000 ರೂ ನೋಟುಗಳನ್ನು ವಾಪಸ್ ಪಡೆಯಲು ಬ್ಯಾಂಕ್‌ನಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಾರ್ಮಿಕರು ಮತ್ತು ಮನೆಕೆಲಸಗಾರರನ್ನೂ ನ್ಯಾಯಾಲಯವು ಗಮನಿಸಿತು. ಇದಕ್ಕೆ ಜನರು ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ ಎಂದು ಆರ್‌ಬಿಐ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮಾತನಾಡಿ, ನೋಟು ಅಮಾನ್ಯೀಕರಣದ ಆರ್ಥಿಕ ನೀತಿಯು ಸಾಮಾಜಿಕ ನೀತಿಯೊಂದಿಗೆ ಸಂಬಂಧ ಹೊಂದಿದೆ. ಅಲ್ಲಿ ಮೂರು ದುಷ್ಪರಿಣಾಮಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತದೆ ಎಂದರು.
ಆರ್‌ಬಿಐ, ಅಡ್ವೊಕೇಟ್ ಆನ್ ರೆಕಾರ್ಡ್ ಎಚ್‌ಎಸ್ ಪರಿಹಾರ್ ಮತ್ತು ವಕೀಲರಾದ ಕುಲದೀಪ್ ಪರಿಹಾರ್ ಮತ್ತು ಇಕ್ಷಿತಾ ಪರಿಹಾರ್ ಅವರು ಹೆಚ್ಚುವರಿ ಅಫಿಡವಿಟ್‌ನಲ್ಲಿ ಆರ್‌ಬಿಐ ಕಾಯಿದೆಯ ಸೆಕ್ಷನ್ 26 ರ ನಿಬಂಧನೆಗಳ ಅನುಸಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್, 1949ರ ಸಾಮಾನ್ಯ ನಿಯಮಗಳೊಂದಿಗೆ ಮಾಡಲಾಗಿದೆ ಎಂದು ಹೇಳಿದರು. ಆರ್‌ಬಿಐ ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರೀಯ ಮಂಡಳಿಯ ಸಭೆಯು 2016ರ ನವೆಂಬರ್ 8 ರಂದು ನಡೆಯಿತು. ವಿವರವಾದ ಚರ್ಚೆಗಳ ನಂತರ ಸಾರ್ವಜನಿಕ ಹಿತಾಸಕ್ತಿಯಿಂದ ಅಂದು ಅಸ್ತಿತ್ವದಲ್ಲಿದ್ದ 500 ಮತ್ತು 1000 ರೂಪಾಯಿಗಳ ನೋಟಗಳನ್ನು ಕಾನೂನುಬದ್ಧವಾಗಿ ಹಿಂಪಡೆಯುವುದರಲ್ಲಿ ಹೆಚ್ಚಿನ ಲಾಭ ಇರುತ್ತದೆ ಎಂದು ಮಂಡಳಿಯು ತೀರ್ಮಾನಿಸಿದೆ ಎಂದರು.
ಇದನ್ನೂ ಓದಿ: ಸುಪ್ರೀಂ ಆದೇಶ ನೀಡಿ 3 ವರ್ಷ ಕಳೆದರೂ ಅಯೋಧ್ಯೆಯಲ್ಲಿ ಇನ್ನು ಆರಂಭಗೊಳ್ಳದ ಹೊಸ ಮಸೀದಿ ನಿರ್ಮಾಣ ಕಾರ್ಯ!
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಚಿದಂಬರಂ, ಸಂಸದರು ನೀತಿಯನ್ನು ಸ್ಥಗಿತಗೊಳಿಸಬಹುದಿತ್ತು ಆದರೆ ಶಾಸಕಾಂಗ ಮಾರ್ಗವನ್ನು ಅನುಸರಿಸಲಿಲ್ಲ ಎಂದು ಪ್ರಸ್ತಾಪಿಸಿದರು.