ಜಿ20 ಬಿಜೆಪಿ ಅಥವಾ ಸರ್ಕಾರದ ಕಾರ್ಯಕ್ರಮವಲ್ಲ, ಭಾರತದ ಕಾರ್ಯಕ್ರಮ, ಎಲ್ಲರೂ ಭಾಗಿಯಾಗಬೇಕು: ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ಮೋದಿ ಕರೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಬುಧವಾರ ಬಿಜೆಪಿ ಸಂಸದೀಯ ಸಭೆ ನಡೆಯಿತು.
ಸಭೆಗೆ ಆಗಮಿಸುತ್ತಿರುವ ಬಿಜೆಪಿ ನಾಯಕರು
ಸಭೆಗೆ ಆಗಮಿಸುತ್ತಿರುವ ಬಿಜೆಪಿ ನಾಯಕರು

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದೆಹಲಿಯಲ್ಲಿ ಬುಧವಾರ ಬಿಜೆಪಿ ಸಂಸದೀಯ ಸಭೆ ನಡೆಯಿತು.

ಇಂದು ಬೆಳಗ್ಗೆ ಆರಂಭವಾದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಇತ್ತೀಚೆಗೆ ಅಭೂತಪೂರ್ವ ಯಶಸ್ಸು ಕಂಡಿದ್ದು ಈ ಹಿನ್ನೆಲೆಯಲ್ಲಿ ಸಭೆಗೆ ಬಂದ ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್ ಗೆ ಬಿಜೆಪಿ ಸಂಸದರು ಕೈಕುಲುಕುವುದು, ಅಭಿನಂದನೆ ಸಲ್ಲಿಸುವುದು ಕಂಡುಬಂತು. 

ಸಭೆಗೆ ಬಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಅಮಿತ್ ಶಾ, ರಾಜನಾಥ್ ಸಿಂಗ್, ಜೆ ಪಿ ನಡ್ಡ ಮೊದಲಾದವರು ಸ್ವಾಗತಿಸಿದರು. ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ನಿನ್ನೆ ಗಾಂಧಿನಗರದಲ್ಲಿ ಅಧಿಕಾರ ವಹಿಸಿಕೊಂಡರು. 

ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಪ್ರಸ್ತುತಿ ಮಂಡಿಸಿದರು. ಭಾರತವು ಹೇಗೆ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ಇತರ ದೇಶಗಳಿಗೆ ಹೋಲಿಸಿದರೆ ಹಣದುಬ್ಬರವನ್ನು ಹೇಗೆ ನಿಯಂತ್ರಿಸಬಹುದು ಎಂದು ವಿವರಿಸಿದರು. 

ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಯಶಸ್ಸಿನ ಶ್ರೇಯಸ್ಸನ್ನು ಪ್ರಧಾನಿ ಮೋದಿ ಅಲ್ಲಿನ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಮತ್ತು ಪದಾಧಿಕಾರಿಗಳು, ಕಾರ್ಯಕರ್ತರಿಗೆ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತೊಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಜಿ20 ಸಭೆ ಬಿಜೆಪಿಯದ್ದು ಅಥವಾ ಸರ್ಕಾರದ ಕಾರ್ಯಕ್ರಮವಲ್ಲ, ಅದು ಭಾರತ ದೇಶದ ಕಾರ್ಯಕ್ರಮ, ಅದರಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ಎಲ್ಲಾ ಸಂಸದರಿಗೆ ಕರೆ ನೀಡಿದ್ದಾರೆ ಎಂದರು.

ಕೆಲ ದಿನಗಳ ಹಿಂದಷ್ಟೇ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 182 ಕ್ಷೇತ್ರಗಳಲ್ಲಿ 156 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು ಮೊನ್ನೆ ಸೋಮವಾರ ಭೂಪೇಂದ್ರ ಪಟೇಲ್ ಸೇರಿದಂತೆ 16 ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಸಂಸತ್ತಿನ ಚಳಿಗಾಲ ಅಧಿವೇಶನ ಮಧ್ಯೆ ಬಿಜೆಪಿ ಸಂಸದೀಯ ಸಭೆ ನಡೆಯುತ್ತಿದ್ದು, ಅಧಿವೇಶನ ಡಿಸೆಂಬರ್ 7ರಂದು ಆರಂಭಗೊಂಡು 17 ದಿನ ಸಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com