ಮೊದಲ ಬಾರಿಗೆ ಗಡಿ ವಿವಾದ ಸಂಬಂಧ ಕೇಂದ್ರ ಸ್ಪಂದಿಸಿದೆ: ಅಮಿತ್ ಶಾ ನಡೆಗೆ ಮಹಾ ಸಿಎಂ ಪ್ರಶಂಸೆ, ಉದ್ಧವ್ ಗೆ ಟಾಂಗ್!

ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಸಭೆ ಕರ್ನಾಟಕ ಪರವಾಗಿತ್ತು ಎಂಬ ಮಾಜಿ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆಗೆ ಟಾಂಗ್ ಕೊಟ್ಟಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮೊದಲ ಬಾರಿಗೆ ಗಡಿ ವಿವಾದ ಸಂಬಂಧ ಕೇಂದ್ರ ಸ್ಪಂದಿಸಿದೆ ಎಂದು ಹೇಳುವ ಮೂಲಕ ಶಾ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ

ಮುಂಬೈ: ಗಡಿ ವಿವಾದ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಸಭೆ ಕರ್ನಾಟಕ ಪರವಾಗಿತ್ತು ಎಂಬ ಮಾಜಿ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿಕೆಗೆ ಟಾಂಗ್ ಕೊಟ್ಟಿರುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮೊದಲ ಬಾರಿಗೆ ಗಡಿ ವಿವಾದ ಸಂಬಂಧ ಕೇಂದ್ರ ಸ್ಪಂದಿಸಿದೆ ಎಂದು ಹೇಳುವ ಮೂಲಕ ಶಾ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ನೇತೃತ್ವದಲ್ಲಿ ನಡೆದ ಸಭೆ ಕುರಿತು ಮೆಚ್ಚುಗೆಯ ಮಾತನಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು, ಈ ಗಡಿ ವಿವಾದ ಸಂಬಂಧಿಸಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿದೆ. ಈ ನಡೆ ಪ್ರಶಂಸಾರ್ಹ ಎಂದಿದ್ದಾರೆ.

‘ಈ ಸಭೆಯಿಂದ ಯಾವುದೇ ಅನುಕೂಲವಾಗಲಿಲ್ಲ’ ಎಂದು ಎನ್‌ಸಿಪಿ, ಕಾಂಗ್ರೆಸ್, ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಮೈತ್ರಿಕೂಟ ವ್ಯಂಗ್ಯವಾಡಿದ ಬೆನ್ನಲ್ಲೇ ಶಿಂದೆ ಈ ಹೇಳಿಕೆ ನೀಡಿದ್ದಾರೆ. 

‘ಈ ವಿವಾದವು ಹಲವಾರು ವರ್ಷಗಳಿಂದ ಇದೆ. ಆದರೆ, ವಿವಾದ ಇತ್ಯರ್ಥಗೊಳಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದು ಇದೇ ಮೊದಲು. ಈ ಹಿಂದೆಯೂ ಕೇಂದ್ರದಲ್ಲಿ, ಮಹಾರಾಷ್ಟ್ರದಲ್ಲಿ ಮತ್ತು ಕರ್ನಾಟಕದಲ್ಲಿ ಸರ್ಕಾರಗಳು ಇದ್ದವು. ಆಗ ಯಾವ ಸರ್ಕಾರ ಯಾವ ಕ್ರಮ ಕೈಗೊಂಡಿತ್ತು ಎಂಬುದು ನಮ್ಮ ಮುಂದಿದೆ. ಹಾಲಿ ಸಮಸ್ಯೆಯ ಸ್ಥಿತಿಗತಿ ಕುರಿತು ನಿಮಗೇ ತಿಳಿದಿದೆ. ಅಮಿತ್‌ ಶಾ ಅವರು ವಿರೋಧ ಪಕ್ಷಗಳ ಸಹಕಾರವನ್ನೂ ಕೋರಿದ್ದಾರೆ’ ಎಂದು ಅವರು ಹೇಳಿದರು. 

ನಕಲಿ ಟ್ವಿಟರ್‌ ಖಾತೆಗಳ ಹಾವಳಿ: 
‘ಈ ಸಮಸ್ಯೆ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭೆ ವೇಳೆ ಮಾತನಾಡಿದರು. ಅಮಿತ್‌ ಶಾ ಅವರೂ ಈ ಕುರಿತು ಹೇಳಿಕೆ ನೀಡಿದರು. ನಕಲಿ ಟ್ವಿಟರ್‌ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಶಿಂದೆ ಹೇಳಿದರು.

‘ಶಾ ನೇತೃತ್ವ ಸಭೆ ಕರ್ನಾಟಕ ಪರವಾಗಿತ್ತು’ ಎಂದಿದ್ದ ಉದ್ಧವ್ ಠಾಕ್ರೆ
ಇನ್ನು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆಯಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಿಲ್ಲ. ಈ ಸಭೆಯಲ್ಲಿ ನಡೆದ ಚರ್ಚೆಗಳು ಕರ್ನಾಟಕ ಪರವಾಗಿಯೇ ಇದ್ದವು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಸಭೆಯು ಗಾಯದ ಮೇಲೆ ಬರೆ ಎಳೆದಿದೆಯಷ್ಟೆ. ಕರ್ನಾಟಕ ಸರ್ಕಾರವು ವಿಧಾನಮಂಡಲದ ಅಧಿವೇಶನವನ್ನು ಬೆಳಗಾವಿಯಲ್ಲಿ ಏಕೆ ನಡೆಸುತ್ತದೆ? ಗಡಿ ವಿವಾದ ಇನ್ನೂ ಬಗೆಹರಿಯದೇ ಇರುವಾಗ ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ಏಕೆ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು’ ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com