ಮುಂಬೈ: ಮಹಾರಾಷ್ಟ್ರ ಸಚಿವರಾದ ಚಂದ್ರಕಾಂತ್ ಪಾಟೀಲ್, ಶಂಭುರಾಜ್ ದೇಸಾಯಿ ಮತ್ತು ಸಂಸದ ಧೈರ್ಯಶೀಲ ಮಾನೆ ಅವರು ವಿಧಾನಮಂಡಲದ ಚಳಿಗಾಲದ ಅಧಿವೇಶನ ಮುಗಿದ ನಂತರ ಕರ್ನಾಟಕದ ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಮರಾಠಿ ಭಾಷಿಕ ಜನರೊಂದಿಗೆ ಸಂವಾದ ನಡೆಸಲಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ದೇಸಾಯಿ, ಪ್ರಸ್ತುತ ನಾಗ್ಪುರದಲ್ಲಿ ಅಧಿವೇಶನ ನಡೆಯುತ್ತಿರುವುದರಿಂದ ಗಡಿ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ವಿಧಾನಸಭಾ ಅಧಿವೇಶನ ಮುಗಿದ ನಂತರ ನಾವು ಮೂವರೂ(ದೇಸಾಯಿ, ಮಾನೆ ಮತ್ತು ಪಾಟೀಲ) ಹೋಗಿ ಗಡಿ ಭಾಗದ ಜನರನ್ನು ಭೇಟಿ ಮಾಡಿ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಕರ್ನಾಟಕದೊಂದಿಗೆ ಮಹಾರಾಷ್ಟ್ರದ ಗಡಿ ವಿವಾದ ಸಂಯೋಜಕರಾಗಿ ನೇಮಕವಾಗಿದ್ದು, ಡಿಸೆಂಬರ್ 6 ರಂದು ಬೆಳಗಾವಿಗೆ ಭೇಟಿ ನೀಡಬೇಕಿತ್ತು. ಆದರೆ ಗಡಿ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಭೇಟಿ ಮುಂದೂಡಿಕೆಯಾಗಿದೆ.
ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಡಿಸೆಂಬರ್ 3 ರಂದು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರನ್ನು ಭೇಟಿಯಾಗಬೇಕಿತ್ತು ಮತ್ತು ದೀರ್ಘಕಾಲದ ವಿವಾದದ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ ಇದು ಸಹ ಸಾಧ್ಯವಾಗಿಲ್ಲ.
Advertisement