ಕೋವಿಡ್ 19: ಚೀನಾದಲ್ಲೇ ಹೀಗಾದರೇ ಭಾರತದ ಗತಿ ಏನು? ನೂತನ ರೂಪಾಂತರ Omicron BF.7 ಕುರಿತು ನೀವು ತಿಳಿದುಕೊಳ್ಳಬೇಕಾದದ್ದು

ಚೀನಾದಲ್ಲಿ ಇತ್ತೀಚಿನ ಉಲ್ಬಣಿಸಿರುವ Covid ಸೋಂಕು BF.7 Omicron ಉಪ-ರೂಪಾಂತರದಿಂದ ಉಂಟಾಗಿದೆ. ಈ ತಿಂಗಳ ಆರಂಭದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ನಂತರ ಚೀನಾ ಭಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೀನಾದಲ್ಲಿ ಇತ್ತೀಚಿನ ಉಲ್ಬಣಿಸಿರುವ Covid ಸೋಂಕು BF.7 Omicron ಉಪ-ರೂಪಾಂತರದಿಂದ ಉಂಟಾಗಿದೆ. ಈ ತಿಂಗಳ ಆರಂಭದಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿದ ನಂತರ ಚೀನಾ ಭಾರಿ ಬಿಕ್ಕಟ್ಟನ್ನು ಎದುರಿಸುತ್ತಿದೆ. 

ಆಸ್ಪತ್ರೆಗಳು ಮತ್ತು ತುರ್ತು ಚಿಕಿತ್ಸಾ ವಿಭಾಗಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಹೊಸದಾಗಿ ಎದುರಾಗಿರುವ BF.7 ರೂಪಾಂತರ ಅಕ್ಟೋಬರ್‌ನಿಂದ ಹರಡಲು ಪ್ರಾರಂಭಿಸಿತ್ತು. ಚೀನಾ ಅಷ್ಟೇ ಅಲ್ಲದೇ ಅಮೆರಿಕ, ಬ್ರಿಟನ್, ಜಪಾನ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ಡೆನ್ಮಾರ್ಕ್ ಸೇರಿದಂತೆ ಹಲವಾರು ಯುರೋಪಿಯನ್ ದೇಶಗಳಲ್ಲಿ ಈ ಸೋಂಕು ಕಾಣಿಸಿಕೊಂಡು ದಿಢೀರ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ.

ಈ ಹಿಂದಿನ ಡೆಲ್ಟಾ BA.1, BA.2 ಮತ್ತು BA.5 ರೂಪಾಂತರಗಳಿಗೆ ಹೋಲಿಸಿದರೆ ಇತ್ತೀಚಿನ ರೂಪಾಂತರಿ ವೈರಾಣು ಹೆಚ್ಚು ಸಾಂಕ್ರಾಮಿಕವಾಗಿದೆ ಅಂತ ನಂಬಲಾಗ್ತಿದೆ. BF.7 ಸಹ ಮರುಸೋಂಕನ್ನು ಉಂಟುಮಾಡುವ ಅಥವಾ ಲಸಿಕೆ ಹಾಕಿದವರಿಗೂ ಸೋಂಕು ಉಂಟುಮಾಡುವ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ. 

ಭಾರತದಲ್ಲಿ ಗುಜರಾತ್ ಹಾಗೂ ಒಡಿಶಾಗಳಲ್ಲಿ BF.7 ರೂಪಾಂತರದ ತಲಾ ಎರಡು ಪ್ರಕರಣಗಳು ಇದುವರೆಗೆ ಪತ್ತೆಯಾಗಿವೆ. 

ಓಮಿಕ್ರಾನ್ ರೂಪಾಂತರಿ BF.7 ಉಪ ತಳಿಯ ಸೋಂಕು ಕೋವಿಡ್-19 ಲಸಿಕೆ ಪಡೆದುಕೊಂಡವರಲ್ಲಿಯೂ ಕಾಣಿಸಿಕೊಳ್ಳಬಹುದು. 'ಸೆಲ್ ಹೋಸ್ಟ್ ಮತ್ತು ಮೈಕ್ರೋಬ್' ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, BF.7 ರೂಪಾಂತರ ಉಪ-ತಳಿ ಮೂಲ ವುಹಾನ್ ವೈರಸ್‌ಗಿಂತ 4.4 ಪಟ್ಟು ಹೆಚ್ಚಿನ ಲಸಿಕೆಗೆ ಪ್ರತಿರೋಧವನ್ನು ಹೊಂದಿದೆ. ಅಂದರೆ ಕೊರೊನಾವೈರಸ್ ಲಸಿಕೆಯ ಮೂಲಕ ಜನರು ಪಡೆದುಕೊಂಡಿರುವ ಪ್ರತಿರೋಧಕ ಶಕ್ತಿಗಿಂತಲೂ ಈ ರೋಗಾಣು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. 

ಈ ಸೋಂಕಿನ ಲಕ್ಷಣಗಳೇನು? ಅನ್ನೋದನ್ನ ನೋಡುವುದಾದರೆ, 
ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳು ಪ್ರಾಥಮಿಕವಾಗಿ ಗೋಚರಿಸುತ್ತವೆ. ಅಂತೆಯೇ ಬಿ.ಎಫ್.7 ಉಪ-ತಳಿಯ ಲಕ್ಷಣಗಳು ಇದಕ್ಕೆ ಭಿನ್ನವಾಗಿಯೇನೂ ಇಲ್ಲ. ಜ್ವರ, ಗಂಟಲು ನೋವು, ಮೂಗು ಸ್ರವಿಸುವಿಕೆ, ಕೆಮ್ಮು ಮತ್ತು ಮೇಲ್ಭಾಗದ ಉಸಿರಾಟದ ಸಮಸ್ಯೆ ಈ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಹಾಗಾದರೆ ಮತ್ತೊಮ್ಮೆ ಕೊರೋನಾದ ಪರಿಸ್ಥಿತಿ ತೀವ್ರವಾಗುತ್ತಾ? ಮತ್ತೆ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಭಾರತದಲ್ಲೂ ದಿಢೀರ್ ಏರಿಕೆಯಾಗುತ್ತಾ? ಗೊತ್ತಿಲ್ಲ. ಆದರೆ ಸದ್ಯಕ್ಕೆ ಕೋವಿಡ್ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎನ್ ಕೆ ಅರೋರಾ ನೀಡಿರುವ ಸಂದರ್ಶನದ ಪ್ರಕಾರ, ಭಾರತೀಯರು ಹೊಸ ಉಪತಳಿಯ ಬಗ್ಗೆ ತೀರಾ ಆತಂಕಪಡುವ ಅಗತ್ಯವೇನೂ ಇಲ್ಲ. ಚೀನಾ ಹಾಗೂ ಇತರೆಡೆಗೆ ಹೋಲಿಕೆ ಮಾಡಿದರೆ, ಭಾರತದ ಮಂದಿಗೆ ಹೈಬ್ರಿಡ್ ರೋಗನಿರೋಧಕತೆಯ ಲಾಭ ಹೆಚ್ಚಿದೆ. ಸಾಮಾನ್ಯರು 2 ನೇ ಬಾರಿ ಬೂಸ್ಟರ್ ಲಸಿಕೆ ಪಡೆಯುವ ಅಗತ್ಯವಿಲ್ಲ. ಆದರೆ ಹೈ ರಿಸ್ಕ್ ಜನಸಂಖ್ಯೆಯಡಿ ಬರುವವರು ಒಂದು ಹೆಚ್ಚುವರಿ ಡೋಸ್ ಪಡೆಯಬೇಕು ಎಂದಿದ್ದಾರೆ ಅರೋರಾ. 

ಭಾರತದಲ್ಲಿ ಶೇ.97 ರಷ್ಟು ವಯಸ್ಕರಿಗೆ ಪ್ರಾಥಮಿಕ ಲಸಿಕೆ ಆಗಿದೆ. ಶೇ.90-95 ರಷ್ಟು ಮಂದಿ ನೈಸರ್ಗಿಕ ಸೋಂಕು ಎದುರಿಸಿದ್ದು ಹೈಬ್ರಿಡ್ ರೋಗನಿರೋಧಕತೆ ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಇದೇ ಹೈಬ್ರಿಡ್ ಇಮ್ಯುನಿಟಿ ಭಾರತೀಯರಿಗೆ ಒಮಿಕ್ರಾನ್ ಸೋಂಕು ಎದುರಿಸುವುದಕ್ಕೂ ಸಹಕಾರಿಯಾಗಿತ್ತು ಎನ್ನುತ್ತಾರೆ ಅರೋರಾ. 

ಹೊಸ ತಳಿಯ ಸೋಂಕು ಹರಡದೇ ಇರಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಮತ್ತು ಕೈಗಳ ನೈರ್ಮಲ್ಯೀಕರಣವನ್ನು ಕಾಪಾಡಿಕೊಳ್ಳುವುದರಿಂದ ಹರಡುವಿಕೆಯನ್ನು ತಡೆಯಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಡಿಸೆಂಬರ್ ಆಸುಪಾಸಿನಲ್ಲಿ ಶೀತ, ಕೆಮ್ಮು ಮತ್ತು ಇತರ ಋತುಮಾನದ ಕಾಯಿಲೆಗಳು ಸಹ ಸಾಮಾನ್ಯವಾಗಿದೆ. ಆದರೆ ನೀವು ಈ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಅಥವಾ ನಿಮ್ಮ ಸುತ್ತಮುತ್ತಲಿನ ಯಾರಾದರೂ ಮೇಲೆ ತಿಳಿಸಲಾದ ರೋಗಲಕ್ಷಣಗಳನ್ನು ಎದುರಿಸುತ್ತಿದ್ದರೆ, ತಕ್ಷಣವೇ ಕೋವಿಡ್-19 ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಮತ್ತು ಕ್ವಾರಂಟೈನ್ ಆಗಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com