ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು, ನಾವು ಎಚ್ಚರವಹಿಸಬೇಕಿದೆ: ಮನ್ ಕಿ ಬಾತ್'ನಲ್ಲಿ ಪ್ರಧಾನಿ ಮೋದಿ
ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ನಾವೂ ಎಚ್ಚರವಹಿಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
Published: 25th December 2022 12:04 PM | Last Updated: 25th December 2022 01:43 PM | A+A A-

ಪ್ರಧಾನಿ ಮೋದಿ
ನವದೆಹಲಿ: ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೊರೋನಾ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು, ನಾವೂ ಎಚ್ಚರವಹಿಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.
ಮಾಸಿಕ ರೇಡಿಯೋ ಕಾರ್ಯಕ್ರಮವಾದ ‘ಮನ್ ಕಿ ಬಾತ್’ನ 96ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿಯವರು, ಪ್ರಪಂಚದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಾವು ಜಾಗರೂಕರಾಗಿರಬೇಕಿದ್ದು, ಮಾಸ್ಕ್ ಧರಿಸುವುದು, ಕೈಗಳನ್ನು ತೊಳೆದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಹಬ್ಬ ಹರಿದಿನಗಳನ್ನು ಎಚ್ಚರಿಕೆಯಿಂದ ಆಚರಿಸುವಂತೆ ಜನತೆಗೆ ಮೋದಿಯವರು ಸಲಹೆ ನೀಡಿದರು.
ಇದನ್ನೂ ಓದಿ: ವಿಶ್ವದಾದ್ಯಂತ ಸಂಭ್ರಮದ ಕ್ರಿಸ್'ಮಸ್ ಆಚರಣೆ: ದೇಶದ ಜನತೆಗೆ ಪ್ರಧಾನಿ ಮೋದಿ ಶುಭಾಶಯ
ಈ ಹಬ್ಬಗಳನ್ನು ಆನಂದಿಂದ ಆಚರಿಸಿ, ಆದರೆ ಸ್ವಲ್ಪ ಜಾಗರೂಕರಾಗಿರಿ, ನಾವು ಜಾಗರೂಕರಾಗಿದ್ದರೆ ನಂತರ ನಾವು ಸುರಕ್ಷಿತವಾಗಿರುತ್ತೇವೆ. ನಮ್ಮ ಸಂತೋಷಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಇದರೊಂದಿಗೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ಶುಭಾಶಯಗಳು ಎಂದು ಹೇಳಿದರು.
2022 ರ ವರ್ಷವು ಅದ್ಭುತವಾಗಿದೆ, ಭೂತಕಾಲದ ಅವಲೋಕನವು ಯಾವಾಗಲೂ ಪ್ರಸ್ತುತ ಮತ್ತು ಭವಿಷ್ಯದ ಸಿದ್ಧತೆಗಳಿಗೆ ನಮಗೆ ಸ್ಫೂರ್ತಿ ನೀಡುತ್ತದೆ. 2022ರಲ್ಲಿ ದೇಶದ ಜನರ ಶಕ್ತಿ, ಅವರ ಸಹಕಾರ, ಸಂಕಲ್ಪ, ಯಶಸ್ಸಿನ ವಿಸ್ತರಣೆ ಎಷ್ಟಿದೆ ಎಂದರೆ ಎಲ್ಲರನ್ನೂ ಈ ‘ಮನ್ ಕಿ ಬಾತ್’ನಲ್ಲಿ ಸೇರಿಸುವುದು ಕಷ್ಟ. ನನ್ನ ಪಾಲಿಗೆ 2022 ಬಹಳ ವಿಶೇಷವಾದ ವರ್ಷವಾಗಿತ್ತು ಎಂದು ತಿಳಿಸಿದ್ದಾರೆ.
2022ರಲ್ಲಿ ದೇಶವಾಸಿಗಳು ಮತ್ತೊಂದು ಅಮರ ಇತಿಹಾಸ ಬರೆದಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ನಡೆದ ‘ಹರ್ ಘರ್ ತಿರಂಗ’ ಅಭಿಯಾನವನ್ನು ಮರೆಯಲು ಅಸಾಧ್ಯ. ಸ್ವಾತಂತ್ರ್ಯದ 75 ವರ್ಷಗಳ ಈ ಅಭಿಯಾನದಲ್ಲಿ ಇಡೀ ದೇಶವೇ ತ್ರಿವರ್ಣ ಧ್ವಜವನ್ನು ಹಿಡಿದು ಸಂಭ್ರಮಿಸಿತು. 6 ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಕೂಡ ಕಳುಹಿಸಿದ್ದಾರೆ. ಈ ಸ್ವಾತಂತ್ರ್ಯದ ಅಮೃತ ಮಹೋತ್ಸವವು ಮುಂದಿನ ವರ್ಷವೂ ಅದೇ ರೀತಿಯಲ್ಲಿ ಮುಂದುವರಿಯುತ್ತದೆ. ಇದು ಅಮೃತ ಕಾಲದ ಅಡಿಪಾಯವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ: 'ಸದೈವ್ ಅಟಲ್' ಸ್ಮಾರಕಕ್ಕೆ ರಾಷ್ಟ್ರಪತಿಗಳು, ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ
ಭಾರತ ವೇಗವಾಗಿ ಪ್ರಗತಿ ಸಾಧಿಸಿದೆ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. 2022ರ ವಿವಿಧ ಯಶಸ್ಸುಗಳು ಇಂದು ಇಡೀ ಜಗತ್ತಿನಲ್ಲಿ ಭಾರತಕ್ಕೆ ವಿಶೇಷ ಸ್ಥಾನವನ್ನು ಸೃಷ್ಟಿಸಿವೆ. 2022 ಎಂದರೆ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಸ್ಥಾನಮಾನವನ್ನು ಸಾಧಿಸಿದೆ. 2022 ಎಂದರೆ ಭಾರತದಿಂದ 220 ಕೋಟಿ ಲಸಿಕೆಗಳ ನಂಬಲಾಗದ ಅಂಕಿಅಂಶವನ್ನು ದಾಟಿದ ದಾಖಲೆ ನಿರ್ಮಾಣವಾಗಿದೆ.
2022 ಎಂದರೆ ದೇಶದ ಜನರಿಂದ ‘ಸ್ವಾವಲಂಬಿ ಭಾರತ’ದ ಸಂಕಲ್ಪವನ್ನು ಅಳವಡಿಸಿಕೊಂಡು ಬದುಕುವುದು. 2022 ಎಂದರೆ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ INS ವಿಕ್ರಾಂತ್‌ಗೆ ಸ್ವಾಗತ ಕೋರಿದ್ದು. 2022 ಎಂದರೆ ಬಾಹ್ಯಾಕಾಶ, ಡ್ರೋನ್ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದ ಕೀರ್ತಿ ಬೆಳಗಿದ್ದು. 2022 ಎಂದರೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತದ ಶಕ್ತಿ ಹೊರಹೊಮ್ಮಿದ್ದು. ಕಾಮನ್‌ವೆಲ್ತ್ ಕ್ರೀಡಾಕೂಟವಾಗಲಿ ಅಥವಾ ನಮ್ಮ ಮಹಿಳಾ ಹಾಕಿ ತಂಡದ ವಿಜಯವಾಗಲಿ ಕ್ರೀಡಾ ಕ್ಷೇತ್ರದಲ್ಲಿಯೂ ಸಹ, ನಮ್ಮ ಯುವಕರು ಅದ್ಭುತ ಸಾಮರ್ಥ್ಯವನ್ನು ತೋರಿಸಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆಯ ಕಾರ್ಯಾರಂಭವು ಭಾರತದ 75 ವರ್ಷಗಳ ಸ್ವಾತಂತ್ರ್ಯದ 'ಅಮೃತಕಾಲ್' ಸಮಯದಲ್ಲಿ ಒಂದು ಮಹತ್ವದ ಸಂದರ್ಭವಾಗಿದೆ ಮತ್ತು ಇದು ದೇಶದ ಆತ್ಮವಿಶ್ವಾಸ ಮತ್ತು ಪರಾಕ್ರಮವನ್ನು ಸೂಚಿಸುತ್ತದೆ. ಈ ಸ್ವದೇಶಿ ವಿಮಾನವಾಹಕ ನೌಕೆಯು ದೇಶದ ತಾಂತ್ರಿಕ ಕುಶಾಗ್ರಮತಿ ಮತ್ತು ಎಂಜಿನಿಯರಿಂಗ್ ಕೌಶಲ್ಯಕ್ಕೆ ಪುರಾವೆಯಾಗಿದೆ. ವಿಮಾನವಾಹಕ ಯುದ್ಧನೌಕೆಯನ್ನು ಉತ್ಪಾದಿಸಲು ಭಾರತದ ಸ್ವಾವಲಂಬನೆಯ ಈ ಕಾರ್ಯವು ದೇಶದ ರಕ್ಷಣಾ ಸ್ವದೇಶೀಕರಣ ಕಾರ್ಯಕ್ರಮಗಳು ಮತ್ತು 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಟ್ಟುನಿಟ್ಟಾದ ನಿಗಾ ವಹಿಸಿ: ಕೋವಿಡ್-19 ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಸಲಹೆ
ಈ ವರ್ಷ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸುವ ದೇಶದ ಜವಾಬ್ದಾರಿಯನ್ನು ಒತ್ತಿ ಹೇಳಿದ ಮೋದಿಯವರು, "ಈ ವರ್ಷ ಭಾರತವು ಜಿ20 ಗುಂಪಿನ ಅಧ್ಯಕ್ಷರ ಪ್ರತಿಷ್ಠಿತ ಜವಾಬ್ದಾರಿಯನ್ನು ಪಡೆದುಕೊಂಡಿದೆ, ನಾನು ಕಳೆದ ಬಾರಿಯೂ ಈ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ" ಎಂದು ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜಯಂತಿ ಹಿನ್ನೆಲೆಯಲ್ಲಿ ವಾಜಪೇಯಿಯವರ ಕುರಿತು ಮಾತನಾಡಿದ ಅವರು, ವಾಜಪೇಯಿಯವರು ಶಿಕ್ಷಣ, ವಿದೇಶಾಂಗ ನೀತಿ ಮತ್ತು ಮೂಲಸೌಕರ್ಯ ಕ್ಷೇತ್ರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಎಂದು ತಿಳಿಸಿದರು.
ನಂತರ ಕೋವಿಡ್ ಕುರಿತು ಮಾತನಾಡಿದ ಮೋದಿಯವರು, ಪ್ರಪಂಚದ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಾವು ಜಾಗರೂಕರಾಗಿರಬೇಕಿದ್ದು, ಮಾಸ್ಕ್ ಧರಿಸುವುದು, ಕೈಗಳನ್ನು ತೊಳೆದುಕೊಳ್ಳುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದರು.
ಇದನ್ನೂ ಓದಿ: ಸಂಸತ್ತಿನಲ್ಲಿ 'ನಾಯಿ' ವಿವಾದ ನಡುವೆ ಖರ್ಗೆ ಮತ್ತಿತರರೊಂದಿಗೆ ಸಿರಿಧಾನ್ಯ ಖಾದ್ಯ ಸವಿದ ಪ್ರಧಾನಿ ಮೋದಿ!
ಕಳೆದ ಕೆಲವು ವರ್ಷಗಳಲ್ಲಿ, ನಾವು ಆರೋಗ್ಯ ಕ್ಷೇತ್ರದಲ್ಲಿ ವಿವಿಧ ಸವಾಲುಗಳನ್ನು ನಿವಾರಿಸಿದ್ದೇವೆ. ಸಿಡುಬು ಮತ್ತು ಪೋಲಿಯೊ ತರಹದ ರೋಗಗಳನ್ನು ನಿರ್ಮೂಲನೆ ಮಾಡಿದ್ದೇವೆ. ಇದೇ ರೀತಿ ಕಾಲಾ ಅಜರ್ ರೋಗವೂ ನಿರ್ಮೂಲನೆಯಾಗಲಿದೆ. ಈ ರೋಗ ಈಗ ಬಿಹಾರ ಮತ್ತು ಜಾರ್ಖಂಡ್‌ನ 4 ಜಿಲ್ಲೆಗಳಲ್ಲಿ ಮಾತ್ರವಿದೆ ಎಂದರು.
ನಮಾಮಿ ಗಂಗಾ ಮಿಷನ್ ಕೂಡ ಜೀವವೈವಿಧ್ಯವನ್ನು ಸುಧಾರಿಸಲು ಸಹಾಯ ಮಾಡಿದೆ. 'ಸ್ವಚ್ಛ ಭಾರತ್ ಮಿಷನ್' ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ದೃಢವಾಗಿ ಬೇರೂರಿದೆ. ಸ್ವಚ್ಛತೆಯ ಪರಂಪರೆಯನ್ನು ಈಗ ಎಲ್ಲಾ ಭಾರತೀಯರು ಒಟ್ಟಾಗಿ ಸಾಗಿಸುತ್ತಿದ್ದಾರೆಂದರು.