ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಕೋವಿಡ್ ಒಂದು ನೆಪ: ಕಾಂಗ್ರೆಸ್

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಸರ್ಕಾರಕ್ಕೆ ಕೋವಿಡ್ ಒಂದು ನೆಪ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಭಾರತ್ ಜೋಡೋ ಯಾತ್ರೆಯ ವೇಳೆ ಬೆಂಬಲಿಗರತ್ತ ಕೈಬೀಸಿದ ರಾಹುಲ್ ಗಾಂಧಿ
ಭಾರತ್ ಜೋಡೋ ಯಾತ್ರೆಯ ವೇಳೆ ಬೆಂಬಲಿಗರತ್ತ ಕೈಬೀಸಿದ ರಾಹುಲ್ ಗಾಂಧಿ

ಶ್ರೀನಗರ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಸರ್ಕಾರಕ್ಕೆ ಕೋವಿಡ್ ಒಂದು ನೆಪ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.

"ನಾವು ಈ ದೇಶದ ಜನರ ಆರೋಗ್ಯ ಮತ್ತು ಕೋವಿಡ್ ಪರಿಸ್ಥಿತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ. ಆದರೆ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಸರ್ಕಾರ ಈ ನಾಟಕ(ಕೋವಿಡ್ ಹರಡುವಿಕೆ) ಮಾಡುತ್ತಿದೆ" ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಲು ಶ್ರೀನಗರಕ್ಕೆ ಆಗಮಿಸಿರುವ ವೇಣುಗೋಪಾಲ್, ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ ಮತ್ತು ಚೀನಾದಿಂದಲೂ ವಿಮಾನಗಳು ಬರುತ್ತಿವೆ ಎಂದರು.

"ಚೀನಾದಿಂದ ವಿಮಾನಗಳು ಬರುತ್ತಿದ್ದರೂ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಸೂಚಿಸಿದ ಯಾವುದೇ ರಾಷ್ಟ್ರೀಯ ಮಟ್ಟದ(ಕೋವಿಡ್) ಪ್ರೋಟೋಕಾಲ್ ಇಲ್ಲ. ಪ್ರಧಾನಿ ಸಾರ್ವಜನಿಕ ಸಭೆಗಳಿಗೆ ಹಾಜರಾಗುತ್ತಿದ್ದಾರೆ ಮತ್ತು ಎಲ್ಲಾ ಇತರ ಸರ್ಕಾರಿ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿವೆ. ಅವುಗಳಿಗೆ ಯಾವುದೇ ನಿರ್ಬಂಧ ಇಲ್ಲ. ಆದರೆ ಭಾರತ್ ಜೋಡೋ ಯಾತ್ರೆಯಿಂದ ಮಾತ್ರ ಅವರಿಗೆ ಸಮಸ್ಯೆ ಆಗುತ್ತಿದೆ" ಎಂದು ವಾಗ್ದಾಳಿ ನಡೆಸಿದರು.

ಇನ್ನುಳಿದ ಎಲ್ಲಾ ಕಾರ್ಯಕ್ರಮಗಳು ಯಾವುದೇ ನಿರ್ಬಂಧ ಇಲ್ಲದೆ ನಡೆಯುತ್ತಿರುವಾಗ ರಾಹುಲ್ ಗಾಂಧಿಗೆ ಮಾತ್ರ ಸರ್ಕಾರ ಏಕೆ ಪತ್ರ ಬರೆಯುತ್ತಿದೆ ಎಂದು ವೇಣುಗೋಪಾಲ್ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com