ಇಹಲೋಕ ತ್ಯಜಿಸಿದ ಶತಾಯುಷಿ ಹೀರಾಬೆನ್: ಪ್ರಧಾನಿ ಮೋದಿಗೆ ಮಾತೃ ವಿಯೋಗ, ಗಣ್ಯರ ಸಂತಾಪ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್​​ನ ಅಹಮದಾಬಾದ್​ನಲ್ಲಿ ಶುಕ್ರವಾರ ನಿಧನರಾದರು.
ತಾಯಿ ಹೀರಾಬೆನ್ ಜೊತೆಗಿರುವ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
ತಾಯಿ ಹೀರಾಬೆನ್ ಜೊತೆಗಿರುವ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)
Updated on

ಅಹಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿಯವರು ಗುಜರಾತ್​​ನ ಅಹಮದಾಬಾದ್​ನಲ್ಲಿ ಶುಕ್ರವಾರ ನಿಧನರಾದರು.

ಹೀರಾಬೆನ್ ಅವರಿಗೆ 100 ವರ್ಷ ವಯಸ್ಸಾಗಿತ್ತು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು  ನಗರದ ಯುಎನ್​ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದರೆ.

ಹೀರಾಬೆನ್ ಮೋದಿ ಅವರು 2022ರ ಜೂನ್ 18ರಂದು 100ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದರು. ಪ್ರಧಾನಿ ಮೋದಿ ಅವರು ಗಾಂಧಿನಗರ ನಿವಾಸಕ್ಕೆ ಭೇಟಿ ನೀಡಿ ತಾಯಿಗೆ ಶುಭಾಶಯ ತಿಳಿಸಿ, ಆಶೀರ್ವಾದ ಪಡೆದಿದ್ದರು. ತಾಯಿಯ ಪಾದ ತೊಳೆದು ಪೂಜಿಸಿದ್ದರು.

ಹೀರಾಬೆನ್‌ ನಿಧನಕ್ಕೆ ಗಣ್ಯರೆಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಅವರ ನಿಧನಕ್ಕೆ ಕೇಂದ್ರ ಸಚಿವ ರಾಜನಾಥ್ ಸಿಂಗ್, ಗುಜರಾತ್​ ಸಿಎಂ ಭೂಪೇಂದ್ರ ಪಟೇಲ್​​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಪೂಜ್ಯ ತಾಯಿ ಹೀರಾಬೆನ್ ಅವರು ಇಹಲೋಕ ತ್ಯಜಿಸಿದ ಸುದ್ದಿ ತಿಳಿದು ಅತ್ಯಂತ ಬೇಸರವಾಯಿತು. ದೇಶಕ್ಕೆ ಹೆಮ್ಮೆ ತಂದ ಪುತ್ರನಿಗೆ ಜನ್ಮ ನೀಡಿದ ಮಹಾತಾಯಿಗೆ ಸದ್ಗತಿ ಕೋರುತ್ತೇನೆ. ಪ್ರಧಾನಿಯವರಿಗೆ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ  ಎಂದಿದ್ದಾರೆ.

ಕುಟುಂಬ ಪೋಷಣೆಗಾಗಿ ಹೀರಾಬೆನ್ ಅವರು ನಡೆಸಿದ ಹೋರಾಟ ಎಲ್ಲರಿಗೂ ಮಾದರಿಯಾಗಿದೆ. ಅವರ ತ್ಯಾಗದ ತಪಸ್ವಿ ಜೀವನ ಸದಾ ನಮ್ಮ ನೆನಪಿನಲ್ಲಿ ಉಳಿಯುತ್ತದೆ. ಈ ದುಃಖದ ಸಮಯದಲ್ಲಿ ಇಡೀ ರಾಷ್ಟ್ರವು ಪ್ರಧಾನಿ ಮೋದಿ ಮತ್ತು ಅವರ ಕುಟುಂಬದೊಂದಿಗೆ ನಿಂತಿದೆ. ಕೋಟಿ ಕೋಟಿ ಜನರ ಪ್ರಾರ್ಥನೆ ನಿಮ್ಮೊಂದಿಗಿದೆ. ಓಂ ಶಾಂತಿ ಎಂದು ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

ನರೇಂದ್ರ ಮೋದಿಯವರ ತಾಯಿಯ ನಿಧನದ ಸುದ್ದಿ ಅತ್ಯಂತ ದುಃಖ ತರಿಸಿದೆ, ತಾಯಿಯ ಮರಣವು ಜೀವನದಲ್ಲಿ ಎಂದೂ ಮರೆಯಲಾಗದ ನೋವನ್ನು ಉಂಟು ಮಾಡುತ್ತದೆ. ಈ ಸಮಯದಲ್ಲಿ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

ಮಗನಿಗೆ ತಾಯಿಯೇ ಇಡೀ ಜಗತ್ತು. ತಾಯಿಯ ಸಾವು ಮಗನಿಗೆ ಭರಿಸಲಾಗದ ಮತ್ತು ತುಂಬಲಾರದ ನಷ್ಟವಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿಯ ನಿಧನವು ತುಂಬಾ ದುಃಖಕರವಾಗಿದೆ. ತಾಯಿಗೆ ಶ್ರೀರಾಮ ಅವರ ಪುಣ್ಯ ಪಾದದಲ್ಲಿ ಸ್ಥಾನ ನೀಡಲಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಟ್ವೀಟ್ ಮಾಡಿದ್ದಾರೆ.

ಅತ್ಯಂತ ಸರಳ ಮತ್ತು ಪ್ರೀತಿಯ ನಗು ಮುಖ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಈ ದುಃಖದ ಸಮಯದಲ್ಲಿ ನರೇಂದ್ರ ಮೋದಿ ಮತ್ತು ಕುಟುಂಬಕ್ಕೆ ಶಕ್ತಿ ನೀಡಲಿ. ಓಂ ಶಾಂತಿ ಎಂದು ನಿತಿನ್ ಗಡ್ಕರಿ ಸಂತಾಪ ಸೂಚಿಸಿದ್ದಾರೆ.

ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರ ನಿಧನದಿಂದ ತೀವ್ರ ನೋವಾಗಿದೆ. ತಾಯಿಯ ಸಾವು ಒಬ್ಬರ ಜೀವನದಲ್ಲಿ ತುಂಬಲು ಅಸಾಧ್ಯವಾದ ಶೂನ್ಯ ಭಾವನೆಯನ್ನು ಉಂಟುಮಾಡುತ್ತದೆ. ಈ ದುಃಖದ ಸಮಯದಲ್ಲಿ ನಾನು ಪ್ರಧಾನಿ ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com