ಸಿಎಂ ಆದ ಬೆನ್ನಲ್ಲೇ ಉದ್ಧವ್ ಠಾಕ್ರೆ ಕೈಗೊಂಡಿದ್ದ ಯೋಜನೆ ಬದಲಿಸಲು ಮುಂದಾದ ಏಕನಾಥ್ ಶಿಂಧೆ

ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನೂತನ ಸಿಎಂ ಏಕನಾಥ್ ಶಿಂಧೆ ಅವರು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಕನಸಿನ ಯೋಜನೆಯೊಂದನ್ನು ಬದಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಏಕನಾಥ್ ಶಿಂಧೆ
ಏಕನಾಥ್ ಶಿಂಧೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನೂತನ ಸಿಎಂ ಏಕನಾಥ್ ಶಿಂಧೆ ಅವರು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಕನಸಿನ ಯೋಜನೆಯೊಂದನ್ನು ಬದಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಮುಂಬೈನ ವಿವಾದಿತ ಮೆಟ್ರೋ ಕಾರ್ ಶೆಡ್ ಯೋಜನೆಯಲ್ಲಿ ಉದ್ಧವ್ ಠಾಕ್ರೆ ಸರ್ಕಾರದ ತೀರ್ಮಾನವನ್ನು ಬದಲಾಯಿಸಲು ಸಿಎಂ ಶಿಂಧೆ ಮುಂದಾಗಿದ್ದು,  2019 ರಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರದ ಅಡಿಯಲ್ಲಿ ಯೋಜಿಸಿದಂತೆ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸಲಾಗುವುದು ಎಂದು ನ್ಯಾಯಾಲಯದಲ್ಲಿ ಸಲ್ಲಿಸುವಂತೆ ಶಿಂಧೆ ಅವರು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಮುಂಬೈನಲ್ಲಿ ಪರಿಸರ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯನ್ನು ಹುಟ್ಟುಹಾಕಿದ ಈ ವಿಷಯವು 2019ಕ್ಕೂ ಹಿಂದಿನದು, ಮುಂಬೈ ಮೆಟ್ರೋ ರೈಲು ಕಾರ್ಪೊರೇಶನ್ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಅನುಮತಿಯನ್ನು ಕೋರಿದಾಗ, ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿವಾದಿತ ಯೋಜನೆಗೆ ಬಿಎಂಸಿ ಚಾಲನೆ ನೀಡಿದ ಕೂಡಲೇ ಪ್ರತಿಭಟನೆಗಳು ಪ್ರಾರಂಭವಾದವು. ಕಾರ್ಯಕರ್ತರು ತಮ್ಮ ಆಂದೋಲನವನ್ನು ಹೆಚ್ಚಿಸುತ್ತಿದ್ದಂತೆ, ಮೆಟ್ರೋ ಕಾರ್ ಶೆಡ್‌ಗಾಗಿ ಗುರುತಿಸಲಾದ ಪ್ರದೇಶವನ್ನು ಜೀವವೈವಿಧ್ಯ ಅಥವಾ ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿಲ್ಲ ಎಂದು ಮುಖ್ಯಮಂತ್ರಿ ಫಡ್ನವಿಸ್ ಹೇಳಿದರು. ಮೆಟ್ರೋ ವಾತಾವರದಣದಲ್ಲಿನ ಇಂಗಾಲದ ಬಿಡುಗಡೆಯನ್ನು ಕಡಿಮೆ ಮಾಡುತ್ತದೆ ಎಂದು ಅವರು ವಾದಿಸಿದ್ದರು. ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ಮೆಟ್ರೋ ಸುರಂಗ ಯೋಜನೆ ನಡೆಯಲಿದೆ ಎಂದು ಹೇಳಿದ್ದರು. 

ಅದೇ ವರ್ಷದ ನಂತರ ನಡೆದ ಅಸೆಂಬ್ಲಿ ಚುನಾವಣೆಯ ನಂತರ, ಶಿವಸೇನೆಯು ಬಹುಕಾಲದ ಮಿತ್ರ ಪಕ್ಷವಾದ ಬಿಜೆಪಿಯಿಂದ ಬೇರ್ಪಟ್ಟು ಮತ್ತು ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿತು. ಬಳಿಕ ಪರಿಸರ ಕಾರ್ಯಕರ್ತರ ಪ್ರತಿಭಟನೆಗೆ ಮಣಿದ ಹೊಸ ಸರ್ಕಾರವು ಮೆಟ್ರೋ ಕಾರ್ ಶೆಡ್ ಅನ್ನು ಕಂಜುರ್ಮಾರ್ಗ್ಗೆ ಸ್ಥಳಾಂತರಿಸಲು ನಿರ್ಧರಿಸಿತು. ಅದರ ನಂತರ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಇದರ ವಿರುದ್ಧ 2020 ರಲ್ಲಿ ಬಾಂಬೆ ಹೈಕೋರ್ಟ್‌ಗೆ ಹೋಯಿತು. ಸರ್ಕಾರ ಶೆಡ್ ಯೋಜನೆಗೆ ಗುರುತಿಸಿದ್ದ ಭೂಮಿ ಉಪ್ಪು ಇಲಾಖೆಗೆ ಸೇರಿದೆ ಎಂದು ವಾದಿಸಿತ್ತು. ಆಗ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅಂದಿನಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ.

ಬಿಜೆಪಿಯ ಮೈತ್ರಿಕೂಟದ ಪಾಲುದಾರರಾಗಿದ್ದಾಗಲೂ ಆರೆಯಲ್ಲಿ ಶೆಡ್ ನಿರ್ಮಿಸುವ ಯೋಜನೆಯನ್ನು ಶಿವಸೇನೆ ವಿರೋಧಿಸುತ್ತಿದೆ. ಯೋಜನೆಯನ್ನು ಸ್ಥಳಾಂತರಿಸುವ ಬಗ್ಗೆ ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ್ದ ಅಂದಿನ ಮುಖ್ಯಮಂತ್ರಿ ಠಾಕ್ರೆ ಕಳೆದ ವರ್ಷ ತರಾತುರಿಯಲ್ಲಿ ಕೈಗೊಂಡ ಮೂಲಸೌಕರ್ಯ ಕಾಮಗಾರಿಗಳು ವ್ಯರ್ಥಕ್ಕೆ ಕಾರಣವಾಗಬಹುದು ಮತ್ತು ನಿಜವಾದ ಅಭಿವೃದ್ಧಿಯಲ್ಲ ಎಂದು ಹೇಳಿದರು.

ಆದರೆ ಇದೀಗ ನೂತನ ಸಿಎಂ ಶಿಂದೆ ಮತ್ತದೇ ವಿವಾದಿತ ಯೋಜನೆಗೆ ಕೈ ಹಾಕಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ಮುಂಬೈ ಮೆಟ್ರೋ ಕೆಲಸವನ್ನು ಮತ್ತೆ ಟ್ರ್ಯಾಕ್‌ಗೆ ತರುವುದಾಗಿ ಟ್ವೀಟ್ ಮಾಡಿದ್ದಾರೆ. 'ಆರೆಯಲ್ಲಿನ ಮೆಟ್ರೋಕಾರ್ ಶೆಡ್ ಅನ್ನು ಮರಳಿ ತರಲು ಶಿಂದೆ ಫಡ್ನವಿಸ್ ಸರ್ಕಾರದ ನಿರ್ಧಾರವು ಮುಂಬೈ ಮೆಟ್ರೋ ಕೆಲಸವನ್ನು ಮತ್ತೆ ಟ್ರ್ಯಾಕ್‌ಗೆ ತರುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com