ನಾಯಿ ಬೊಗಳಿದ್ದಕ್ಕೆ ಕಬ್ಬಿಣದ ರಾಡ್‍ನಿಂದ ಮಾರಣಾಂತಿಕ ಹಲ್ಲೆ; ತಡೆಯಲು ಬಂದವರಿಗೂ ಗಾಯ, ಎಫ್ಐಆರ್ ದಾಖಲು!

ನಾಯಿ ಬೊಗಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ನಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ನಾಯಿ ಮೇಲೆ ಹಲ್ಲೆ
ನಾಯಿ ಮೇಲೆ ಹಲ್ಲೆ

ನವದೆಹಲಿ: ನಾಯಿ ಬೊಗಳಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ನಾಯಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಪಶ್ಚಿಮ ವಿಹಾರ್‌ನಲ್ಲಿ ಈ ಧಾರುಣ ಘಟನೆ ನಡೆದಿದ್ದು, ನಾಯಿ ಬೊಗಳಿದ್ದಕ್ಕೆ ಕೋಪಗೊಂಡ ಧರಂವೀರ್ ದಹಿಯಾ ಎಂಬ ವ್ಯಕ್ತಿ ನಾಯಿ ಹಾಗೂ ನೆರೆಮನೆಯ ಮೂವರು ಕುಟುಂಬ ಸದಸ್ಯರ ಮೇಲೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿ, ಗಾಯಗೊಳಿಸಿದ್ದಾನೆ. ಘಟನೆಯಲ್ಲಿ ನೆರೆಮನೆಯ ಒಂದೇ ಕುಟುಂಬದ ಮೂವರು ಸದಸ್ಯರು ಹಾಗೂ ಅವರ ಸಾಕುನಾಯಿ ಗಾಯಗೊಂಡಿದ್ದು, ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಶ್ವಾನದ ತಲೆಗೆ ಬಲವಾದ ಏಟು ಬಿದ್ದಿದ್ದು, ಅದರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದೆ ಎನ್ನಲಾಗಿದೆ. ಇನ್ನು ಚಿಕಿತ್ಸೆಗಾಗಿ ನಾಯಿಯನ್ನು ಪಶುವೈದ್ಯರ ಬಳಿ ಕರೆದೊಯ್ಯಲಾಗಿದೆ ಎಂದು ಶ್ವಾನದ ಮಾಲೀಕರು ತಿಳಿಸಿದ್ದಾರೆ. ಈ ದೃಶ್ಯ ಸಮೀಪದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿಯು ರಾಡ್‌ನಿಂದ ನಾಯಿಗೆ ಹೊಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಆತ ತಡೆಯಲು ಬಂದ ನಾಯಿಯ ಮಾಲೀಕರಿಗೂ ಹೊಡೆದಿದ್ದಾನೆ. ಕುಟುಂಬದ ಮತ್ತೊಬ್ಬರು ಆತನನ್ನು ತಡೆಯಲು ಮುಂದಾದಾಗ ಅವರಿಗೂ ತಲೆಗೆ ಹೊಡೆದಿದ್ದಾನೆ.

ಈ ಸಂಬಂಧ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಕ್ಷಿತ್ (ನಾಯಿಯ ಮಾಲೀಕ), ಹೇಳಿಕೆಯ ಮೇರೆಗೆ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಸತ್ಯಾಂಶವನ್ನು ಪರಿಶೀಲಿಸುತ್ತಿದ್ದಾರೆ. ಸದ್ಯ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ?
ದೆಹಲಿಯ ಪಶ್ಚಿಮ ವಿಹಾರ್ ನ ಎ ಬ್ಲಾಕ್  ನಿವಾಸಿ ರಕ್ಷಿತ್ ಮಾಲೀಕತ್ವದ ನಾಯಿಯು ಆರೋಪಿ ದಹಿಯಾ ಪುತ್ರ ಧರ್ಮವೀರ್‌ ಬಳಿ ಬೊಗಳಲು ಪ್ರಾರಂಭಿಸಿತು, ನಂತರ ಅವರು ನಾಯಿಯನ್ನು ಬಾಲದಿಂದ ಎತ್ತಿಕೊಂಡು ಎಸೆದರು. ನಾಯಿಯ ಮಾಲೀಕ ರಕ್ಷಿತ್ ಅದನ್ನು ರಕ್ಷಿಸಲು ಬಂದರು ಆದರೆ ದಹಿಯಾ ನಾಯಿಯ ಮೇಲೆ ದಾಳಿ ಮಾಡಿದ್ದಾರೆ. ಈ ಮಧ್ಯೆ ಕೋಪಗೊಂಡ ನಾಯಿಯು ಧರ್ಮವೀರ್‌ಗೆ ಕಚ್ಚಿದೆ. ಇದು ದಹಿಯಾ ಮತ್ತು ರಕ್ಷಿತ್ ನಡುವೆ ಸಣ್ಣ ಜಗಳಕ್ಕೆ ಕಾರಣವಾಯಿತು. ಸ್ವಲ್ಪ ಸಮಯದ ನಂತರ ದಹಿಯಾ ಕಬ್ಬಿಣದ ಪೈಪ್‌ನೊಂದಿಗೆ ಹಿಂತಿರುಗಿ ನಾಯಿಯ ತಲೆಗೆ ಹೊಡೆದನು. ಈ ವೇಳೆ ಅದನ್ನು ತಡೆಯಲು ಬಂದ ನಾಯಿ ಮಾಲೀಕ ರಕ್ಷಿತ್ (25) ಮತ್ತು ಇನ್ನೊಬ್ಬ ವ್ಯಕ್ತಿ ಹೇಮಂತ್ (53)ಗೂ ದಹಿಯಾ ಪೈಪ್‌ನಿಂದ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಿತ್ (ನಾಯಿಯ ಮಾಲೀಕ) ಹೇಳಿಕೆ ಮೇರೆಗೆ ಪಶ್ಚಿಮ ವಿಹಾರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಪ್ರಾಣಿ ಹಿಂಸೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com