ನಡ್ಡಾ ಭೇಟಿಯನ್ನು ತಳ್ಳಿಹಾಕಿದ ಆನಂದ್ ಶರ್ಮಾ; ಭೇಟಿ ಮಾಡುವುದಾದರೆ ಬಹಿರಂಗವಾಗಿಯೇ ಮಾಡುತ್ತೇನೆ-ಕಾಂಗ್ರೆಸ್ ನಾಯಕ
ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.
Published: 08th July 2022 11:45 AM | Last Updated: 08th July 2022 01:15 PM | A+A A-

ಆನಂದ್ ಶರ್ಮ
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿರುವ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ನಾನು ಜೆಪಿ ನಡ್ಡಾ ಅವರನ್ನು ಭೇಟಿ ಮಾಡುವುದಾದರೆ ಬಹಿರಂಗವಾಗಿಯೇ ಭೇಟಿ ಮಾಡುತ್ತೇನೆ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ನಾವಿಬ್ಬರೂ ಹಿಮಾಚಲ ಪ್ರದೇಶದವರೇ ಆಗಿದ್ದು ಒಂದೇ ವಿವಿಯಲ್ಲಿ ಓದಿದ್ದೇವೆ. ನಡ್ಡಾ ಅವರೊಂದಿಗೆ ಹಳೆಯ ಸಾಮಾಜಿಕ ಹಾಗೂ ಕೌಟುಂಬಿಕ ನಂಟನ್ನು ಹೊಂದಿದ್ದೇನೆ. ನನ್ನ ರಾಜ್ಯ ಹಾಗೂ ಒಟ್ಟಿಗೆ ವಿದ್ಯಾಭ್ಯಾಸ ಮಾಡಿದ ವಿಶ್ವವಿದ್ಯಾನಿಲಯದಿಂದ ಒಬ್ಬರು ಆಡಳಿತಾರೂಢ ಪಕ್ಷದ ಅಧ್ಯಕ್ಷರಾಗಿರುವುದು ನನಗೆ ಹೆಮ್ಮೆಯ ಸಂಗತಿ ಎಂದು ಆನಂದ್ ಶರ್ಮಾ ನಡ್ಡಾ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ ಎಂದ ಮಾತ್ರಕ್ಕೆ ಅದು ವೈಯಕ್ತಿಕ ದ್ವೇಷವಾಗಿರಬೇಕಿಲ್ಲ. ನಡ್ಡಾ ಅವರನ್ನು ನಾನು ಭೇಟಿ ಮಾಡುವುದಾದರೆ ನಾನು ಬಹಿರಂಗವಾಗಿಯೇ ಮಾಡುತ್ತೇನೆ. ಅದು ನನ್ನ ಹಕ್ಕು, ನಾನು ವದಂತಿಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಆನಂದ್ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಜೆಪಿ ನಡ್ಡಾ ಭೇಟಿ ಮಾಡಿದ ಆನಂದ್ ಶರ್ಮಾ: ಹಲವು ಊಹಾಪೋಹ
ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಆನಂದ್ ಶರ್ಮಾ, ಹಿಮಾಚಲ ಪ್ರದೆಶ ವಿವಿಯ ಹಳೆಯ ವಿದ್ಯಾರ್ಥಿಗಳ ಸಂಘ ತಮ್ಮನ್ನು ಹಾಗೂ ನಡ್ಡಾ ಅವರನ್ನು ಸನ್ಮಾನ ಮಾಡಲು ಆಹ್ವಾನಿಸಿತ್ತು ಎಂದು ಹೇಳಿದ್ದಾರೆ.
ಸಭೆಯಲ್ಲಿ ಭಾಗವಹಿಸುವ ಬಗ್ಗೆ ನಡ್ಡಾ ಅವರೊಂದಿಗೆ ಫೋನ್ ಮೂಲಕ ಮಾತನಾಡಿದ್ದೆ ಎಂದು ಆನಂದ್ ಶರ್ಮಾ ಹೇಳಿದಾರೆ. ಕಾಂಗ್ರೆಸ್ ನಲ್ಲಿ ನಾಯಕತ್ವದ ಬಗ್ಗೆ ಧ್ವನಿ ಎತ್ತಿದ್ದ ಜಿ-23 ನಾಯಕರ ಪೈಕಿ ಆನಂದ್ ಶರ್ಮಾ ಸಹ ಒಬ್ಬರಾಗಿದ್ದಾರೆ.