ರಾಷ್ಟ್ರಪತಿ ಚುನಾವಣೆಯ ಮತದಾನ ಮುಕ್ತಾಯ, ದ್ರೌಪದಿ ಮುರ್ಮು ಗೆಲುವ ಬಹುತೇಕ ಖಚಿತ
ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ, 15ನೇ ರಾಷ್ಟ್ರಪತಿಯ ಆಯ್ಕೆಗಾಗಿ ಸೋಮವಾರ ಚುನಾವಣೆ ನಡೆಯಿತು. ದೇಶದ ಒಟ್ಟು 770 ಸಂಸದರು ಮತ್ತು 4,033 ಶಾಸಕರು ಮತ ಚಲಾಯಿಸುವ ಮೂಲಕ ರಾಷ್ಟ್ರಪತಿ ಚುನಾವಣೆ...
Published: 18th July 2022 08:02 PM | Last Updated: 18th July 2022 08:04 PM | A+A A-

ರಾಷ್ಟ್ರಪತಿ ಅಭ್ಯರ್ಥಿಗಳಾದ ದ್ರೌಪದಿ ಮುರ್ಮು, ಯಶವಂತ ಸಿನ್ಹಾ
ನವದೆಹಲಿ: ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ, 15ನೇ ರಾಷ್ಟ್ರಪತಿಯ ಆಯ್ಕೆಗಾಗಿ ಸೋಮವಾರ ಚುನಾವಣೆ ನಡೆಯಿತು. ದೇಶದ ಒಟ್ಟು 770 ಸಂಸದರು ಮತ್ತು 4,033 ಶಾಸಕರು ಮತ ಚಲಾಯಿಸುವ ಮೂಲಕ ರಾಷ್ಟ್ರಪತಿ ಚುನಾವಣೆ ಮುಕ್ತಾಯಗೊಂಡಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವ ಬಹುತೇಕ ಖಚಿತವಾಗಿದೆ.
ಇಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಶೇ. 98.90 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಸಂಸತ್ ಚುನಾವಣಾಧಿಕಾರಿ ಪಿಸಿ ಮೋದಿ ಅವರು ತಿಳಿಸಿದ್ದಾರೆ.
ಇದನ್ನು ಓದಿ: ರಾಷ್ಟ್ರಪತಿ ಚುನಾವಣೆ; ವ್ಹೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸೇರಿದಂತೆ ಹಲವು ನಾಯಕರು ಸಂಸತ್ ಭವನದಲ್ಲಿ ಮತ ಚಲಾಯಿಸಿದರು. ಅಲ್ಲದೆ ದೇಶಾದ್ಯಂತ ರಾಜ್ಯ ವಿಧಾನಸಭೆಗಳಲ್ಲೂ ಮತದಾನ ನಡೆಯಿತು.
ರಾಷ್ಟ್ರಪತಿ ಚುನಾವಣೆಯಲ್ಲಿ ವಿವಿಧ ಪಕ್ಷಗಳ ನಿಲುವಿನ ಪ್ರಕಾರ, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಗೆಲುವು ಸಾಧಿಸುವ ಸಾಧ್ಯತೆ ಇದೆ. ಜುಲೈ 21 ರಂದು ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.
ಮತದಾನದ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಚುನಾವಣಾಧಿಕಾರಿ ಮೋದಿ, 727 ಸಂಸದರು ಮತ್ತು ಒಂಬತ್ತು ಶಾಸಕರು ಸೇರಿದಂತೆ 736 ಮತದಾರರಿಗೆ ಸಂಸತ್ ಭವನದಲ್ಲಿ ಮತ ಚಲಾಯಿಸಲು ಚುನಾವಣಾ ಆಯೋಗ ಅನುಮತಿ ನೀಡಿತ್ತು. ಆ ಪೈಕಿ 728 (719 ಸಂಸದರು ಮತ್ತು ಒಂಬತ್ತು ಶಾಸಕರು) ಮಂದಿ ಮತ ಚಲಾಯಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ಆರು ಸಂಸದರು ಮತ ಚಲಾಯಿಸಿಲ್ಲ ಎಂದು ಅಧಿಕಾರಿ ಹೇಳಿದ್ದರು. ಆದರೆ ಅಂಕಿಅಂಶಗಳನ್ನು ಮರುಸಂಗ್ರಹಿಸಿದ ನಂತರ ಮತ ಚಲಾಯಿಸಿದ ಸಂಸದರ ಸಂಖ್ಯೆ ಎಂಟಕ್ಕೆ ಏರಿಕೆಯಾಯಿತು.