ಸಚಿವ ಸ್ಥಾನ ಕೊಡಿಸುವುದಾಗಿ ಶಾಸಕರೊಬ್ಬರಿಗೆ 100 ಕೋಟಿ ರೂ. ವಂಚಿಸಲು ಯತ್ನಿಸಿದ್ದ ನಾಲ್ವರ ಬಂಧನ

ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸುವ ನೆಪದಲ್ಲಿ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ್ದ ನಾಲ್ವರ ತಂಡವನ್ನು ಸುಲಿಗೆ ನಿಗ್ರಹ ದಳ ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವ ಸ್ಥಾನ ಕೊಡಿಸುವ ನೆಪದಲ್ಲಿ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿ ವಂಚಿಸಲು ಯತ್ನಿಸಿದ್ದ ನಾಲ್ವರ ತಂಡವನ್ನು ಸುಲಿಗೆ ನಿಗ್ರಹ ದಳ ಬಂಧಿಸಿದೆ.

ಬಂಧಿತರನ್ನು ರಿಯಾಜ್ ಶೇಖ್, ಯೋಗೇಶ್ ಕುಲಕರ್ಣಿ, ಸಾಗರ್ ಸಾಂಘ್ವಿ ಮತ್ತು ಜಾಫರ್ ಉಸ್ಮಾನಿ ಎಂದು ಗುರುತಿಸಲಾಗಿದೆ. ನೂತನವಾಗಿ ರಚನೆಯಾದ ಮಹಾರಾಷ್ಟ್ರ ಸರ್ಕಾರದಲ್ಲಿ ಖಾತೆಗಳ ಮರುಹಂಚಿಕೆ ಊಹಾಪೋಹಗಳ ಮಧ್ಯೆ ಈ ಪ್ರಕರಣ ಬೆಳಕಿಗೆ ಬಂದಿದೆ.

ತಮ್ಮ ಆಪ್ತ ಸಹಾಯಕನಿಗೆ ಜುಲೈ 16 ರಂದು ರಿಯಾಜ್ ಶೇಖ್ ಎಂಬ ವ್ಯಕ್ತಿಯಿಂದ ಕರೆ ಬಂದಿದೆ ಎಂದು ದೌಂಡ್ ನ ಬಿಜೆಪಿ ಶಾಸಕ ರಾಹುಲ್ ಕುಲ್ ಅವರು ಪೊಲೀಸರಿಗೆ ದೂರು ನೀಡಿದ ನಂತರ ನಾಲ್ವರನ್ನು ಬಂಧಿಸಲಾಗಿದೆ. ರಾಹುಲ್ ಕುಲ್ ಅವರಿಗೆ ರಿಯಾಜ್ ಶೇಖ್ ತನ್ನನ್ನು ಭೇಟಿ ಮಾಡುವಂತೆ ಹೇಳಿದ್ದರು.

ಇದರ ಬೆನ್ನಲ್ಲೇ ಮುಂಬೈನ ಹೋಟೆಲ್‌ವೊಂದರಲ್ಲಿ ಕುಲ್ ಅವರನ್ನು ರಿಯಾಜ್ ಶೇಖ್ ಭೇಟಿಯಾಗಿ ಅಲ್ಲಿ ಹಿರಿಯ ರಾಜಕಾರಣಿಯೊಬ್ಬರು ತಮ್ಮ ಕೆಲಸವನ್ನು ಮಾಡುತ್ತಾರೆ. ಆದರೆ ಅದಕ್ಕಾಗಿ ಅವರು 100 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟು ಇತರೆ ಆರೋಪಿಗಳೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು ಮತ್ತು 100 ಕೋಟಿಗಳ ಬದಲಿಗೆ 90 ಕೋಟಿ ರೂ.ಗಳನ್ನು ಅಂತಿಮಗೊಳಿಸಲಾಯಿತು. ಆದರೆ ರಿಯಾಜ್ ಮುಂಗಡವಾಗಿ ಶೇ.20ರಷ್ಟು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದ. ಶಾಸಕರೂ ಕೂಡ ಶೇ. 20 ರಷ್ಟು ಹಣ ಕೊಡಲು ಒಪ್ಪಿ ನಂತರ ಬರುವಂತೆ ಹೇಳಿದರು.

ಏತನ್ಮಧ್ಯೆ, ಅನುಮಾನಗೊಂಡ ಕುಲ್ ಈ ಎಲ್ಲದರ ಕುರಿತು ಪಕ್ಷದ ವರಿಷ್ಠರಿಗೆ ಮಾಹಿತಿ ನೀಡಿ ಮರೈನ್ ಡ್ರೈವ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದ ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಅವರು ಪ್ರಕರಣವನ್ನು ನಗರ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿದ್ದರು. ಬಳಿಕ ನಗರ ಅಪರಾಧ ವಿಭಾಗದ ಪೊಲೀಸರು ಬಲೆ ಬೀಸಿದ್ದು, ಆರೋಪಿಗಳು ಹಾಗೂ ಆತನ ಸಹಚರರು 18 ಕೋಟಿ ಮುಂಗಡ ಹಣ ವಸೂಲಿ ಮಾಡಲು ಶಾಸಕರನ್ನು ಭೇಟಿ ಮಾಡಲು ಹೋಟೆಲ್‌ಗೆ ತೆರಳಿದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಂತರ ಅವರನ್ನು ವಿಚಾರಣೆಗಾಗಿ ಪೊಲೀಸ್ ಪ್ರಧಾನ ಕಚೇರಿಗೆ ಕರೆತರಲಾಯಿತು.

ಬಂಧಿತ ರಿಯಾಜ್ ಶೇಖ್, ಯೋಗೇಶ್ ಕುಲಕರ್ಣಿ, ಸಾಗರ್ ಸಾಂಘ್ವಿ ಮತ್ತು ಜಾಫರ್ ಉಸ್ಮಾನಿ ಈ ನಾಲ್ವರನ್ನು ಜುಲೈ 26ರವರೆಗೆ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಆರೋಪಿಯಿಂದ ಮೂರು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com