
ಸಿಎಂ ಭೂಪೇಶ್ ಬಘೇಲ್, ಡಿಯೋ
ನವದೆಹಲಿ: ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಂತೆಯೇ, ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ. ಸಚಿವ ಟಿಎಸ್ ಸಿಂಗ್ ದೇವ್ ಒಂದು ಇಲಾಖೆಯ ಹೊಣೆಯನ್ನು ತ್ಯಜಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಶನಿವಾರ ಸಂಜೆ ದೆಹಲಿಗೆ ತೆರಳಲಿದ್ದು, ಅಲ್ಲಿ ಪಕ್ಷದ ಹೈಕಮಾಂಡ್ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.
ಸದ್ಯ ಭೂಪಾಲ್ ನಲ್ಲಿರುವ ಸಿಂಗ್ ಡಿಯೋ ಕೂಡಾ ಇಂದು ಸಂಜೆ ದೆಹಲಿಗೆ ತೆರಳಲಿದ್ದು, ಪರಿಷ್ಠರನ್ನು ಭೇಟಿಯಾಗಲು ಬಯಸಿದ್ದಾರೆ ಎಂದು ಸಚಿವರ ಕಾರ್ಯಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಿಮಾಚಲ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಹಿರಿಯ ವೀಕ್ಷಕರಾಗಿ ನೇಮಕಗೊಂಡಿರುವ ಸಿಎಂ ಬಘೇಲ್ ಅವರು ಭಾನುವಾರ ಪಕ್ಷದ ಹಿರಿಯ ನಾಯಕರೊಂದಿಗೆ ಈ ಸಂಬಂಧ ಚರ್ಚೆ ನಡೆಸುವ ಸಾಧ್ಯತೆಯಿದೆ.
ಮುಖ್ಯಮಂತ್ರಿಯವರು ಸಂಜೆ 4 ಗಂಟೆ ಸುಮಾರಿಗೆ ದೆಹಲಿಗೆ ತೆರಳಲಿದ್ದು, ಇಂದು ರಾತ್ರಿ ಅಲ್ಲಿಯೇ ತಂಗಲಿದ್ದಾರೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ಸಿಂಗ್ ದೇವ್ ಎಪಿಸೋಡ್ ನಂತರ ರಾಜ್ಯ ಘಟಕದೊಳಗಿನ ಬೆಳವಣಿಗೆಗಳ ಬಗ್ಗೆ ಬಘೇಲ್ ಪಕ್ಷದ ಹೈಕಮಾಂಡ್‌ಗೆ ತಿಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಜುಲೈ 16 ರಂದು ರಾಜ್ಯ ಸರ್ಕಾರದಲ್ಲಿ ತನ್ನನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಬಘೇಲ್ ಜೊತೆಗೆ ಸಿಂಗ್ ಡಿಯೋ ವಾಗ್ವಾದ ನಡೆಸಿದ ನಂತರ, ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಖಾತೆ ತೊರೆದಿದ್ದರು. ಇದು ಆಡಳಿತಾರೂಢ ಪಕ್ಷದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಆದಾಗ್ಯೂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ, 20 ಅಂಶಗಳ ಅನುಷ್ಟಾನ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಸಚಿವರಾಗಿ ಉಳಿದಿದ್ದಾರೆ.