3,419 ಕೋಟಿ ರೂ. ವಿದ್ಯುತ್ ಬಿಲ್ ಬಂದದ್ದು ನೋಡಿ ಕುಟುಂಬಕ್ಕೆ ಶಾಕ್; ಮಾವ ಅಸ್ವಸ್ಥ!

ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿ ಪ್ರಿಯಾಂಕಾ ಗುಪ್ತಾ ಎಂಬುವವರಿಗೆ ₹ 3,419 ಕೋಟಿಯಷ್ಟು ವಿದ್ಯುತ್‌ ಬಿಲ್‌ ಬಂದಿದೆ. ಬಿಲ್ ನೋಡಿದ ಪ್ರಿಯಾಂಕಾ ಅವರ ಮಾವ ಇದೀಗ ಅಸ್ವಸ್ಥರಾಗಿರುವುದಾಗಿ ತಿಳಿಸಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿ ಪ್ರಿಯಾಂಕಾ ಗುಪ್ತಾ ಎಂಬುವವರಿಗೆ ₹ 3,419 ಕೋಟಿಯಷ್ಟು ವಿದ್ಯುತ್‌ ಬಿಲ್‌ ಬಂದಿದೆ. ಬಿಲ್ ನೋಡಿದ ಪ್ರಿಯಾಂಕಾ ಅವರ ಮಾವ ಇದೀಗ ಅಸ್ವಸ್ಥರಾಗಿರುವುದಾಗಿ ತಿಳಿಸಿದ್ದಾರೆ.

'ಮಾನವ ದೋಷ'ದಿಂದ ಹೀಗಾಗಿದೆ ಎಂದು ಮಧ್ಯಪ್ರದೇಶದ ಸರ್ಕಾರ ನಡೆಸುತ್ತಿರುವ ವಿದ್ಯುತ್ ಕಂಪನಿ ಆರೋಪಿಸಿದೆ. ಇದೀಗ ಸರಿಪಡಿಸಿದ ಬಿಲ್ ನೀಡಿದ್ದು, ಅದರಲ್ಲಿ ₹ 1,300 ಅನ್ನು ಪಾವತಿಸಬೇಕಿದೆ. ಸದ್ಯ, ಈ ಬಿಲ್ ನಗರದ ಶಿವ ವಿಹಾರ್ ಕಾಲೋನಿ ನಿವಾಸದಲ್ಲಿರುವ ಗುಪ್ತಾ ಕುಟುಂಬದ ಆತಂಕವನ್ನು ನಿವಾರಿಸಿದೆ.

ಪ್ರಿಯಾಂಕಾ ಗುಪ್ತಾ ಅವರ ಪತಿ ಸಂಜೀವ್ ಕಂಕಣೆ, ಮನೆಯಲ್ಲಿನ ಬಳಕೆಗಾಗಿ ಜುಲೈ ತಿಂಗಳಿನಲ್ಲಿ ನೀಡಲಾಗಿದ್ದ ವಿದ್ಯುತ್ ಬಿಲ್‌ನಲ್ಲಿನ ದೊಡ್ಡ ಅಂಕಿಅಂಶವನ್ನು ನೋಡಿದ ನಂತರ ನಮ್ಮ ತಂದೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.

ಜುಲೈ 20 ರಂದು ನೀಡಲಾದ ಈ ಬಿಲ್ ಅನ್ನು ಮಧ್ಯಪ್ರದೇಶದ ಮಧ್ಯ ಕ್ಷೇತ್ರ ವಿದ್ಯುತ್ ವಿತ್ರನ್ ಕಂಪನಿಯ (MPMKVVC) ಪೋರ್ಟಲ್ ಮೂಲಕ ಪರಿಶೀಲಿಸಲಾಯಿತು. ಆದರೆ, ಇಲ್ಲಿ ಈ ಬಿಲ್ ಸರಿಯಾಗಿದೆ ಎಂದು ಅವರು ಹೇಳಿದರು. ಬಳಿಕ ರಾಜ್ಯ ವಿದ್ಯುತ್ ಕಂಪನಿಯು ಈ ಬಿಲ್ ಅನ್ನು ಸರಿಪಡಿಸಿತು ಎಂದು ತಿಳಿಸಿದರು.

ಎಂಪಿಎಂಕೆವಿವಿಸಿಯ ಜನರಲ್ ಮ್ಯಾನೇಜರ್ ನಿತಿನ್ ಮಾಂಗ್ಲಿಕ್ ಮಾತನಾಡಿ, ಮಾನವ ದೋಷದಿಂದ ಭಾರಿ ವಿದ್ಯುತ್ ಬಿಲ್ ಬಂದಿದ್ದು, ಸಂಬಂಧಪಟ್ಟ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

‘ನೌಕರರೊಬ್ಬರು ಸಾಫ್ಟ್ ವೇರ್‌ನಲ್ಲಿ ಬಳಕೆಯಾಗುವ ಘಟಕಗಳ ಜಾಗದಲ್ಲಿ ಗ್ರಾಹಕ ಸಂಖ್ಯೆಯನ್ನು ನಮೂದಿಸಿದ್ದರಿಂದ ಹೆಚ್ಚಿನ ಮೊತ್ತದ ಬಿಲ್ ಬಂದಿದೆ. ನಂತರ ಅದನ್ನು ಸರಿಪಡಿಸಿ ₹ 1,300 ಇರುವ ಬಿಲ್ ಅನ್ನು ವಿದ್ಯುತ್ ಗ್ರಾಹಕರಿಗೆ ನೀಡಲಾಗಿದೆ’ ಎಂದರು.

ದೋಷವನ್ನು ಸರಿಪಡಿಸಲಾಗಿದ್ದು, ಸಂಬಂಧಪಟ್ಟ ನೌಕರನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಧ್ಯ ಪ್ರದೇಶದ ಇಂಧನ ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com