ಕಾಂಗ್ರೆಸ್ ನಾಯಕನ 'ರಾಷ್ಟ್ರಪತ್ನಿ' ಹೇಳಿಕೆ: ಪಕ್ಷ ಕ್ಷಮೆಯಾಚಿಸಬೇಕೆಂದು ಬಿಜೆಪಿ ಒತ್ತಾಯ

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿರುವ 'ರಾಷ್ಟ್ರಪತ್ನಿ' ಹೇಳಿಕೆಯು ಬಿಜೆಪಿಯ ಕಿಚ್ಚಿಗೆ ಕಾರಣವಾಗಿದೆ. ಇದು ಕಾಂಗ್ರೆಸ್ ರಾಷ್ಟ್ರಪತಿಗೆ ಮಾಡುವ ಅವಮಾನ, ಹೀಗಾಗಿ ಕೂಡಲೇ ಕ್ಷಮೆ ಕೇಳಬೇಕು ಎಂದು ಬಿಜೆಪಿ ಸಂಸದರು ಒತ್ತಾಯಿಸಿದ್ದಾರೆ.
ಸದನದಲ್ಲಿ ಸ್ಮೃತಿ ಇರಾನಿ
ಸದನದಲ್ಲಿ ಸ್ಮೃತಿ ಇರಾನಿ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು 'ರಾಷ್ಟ್ರಪತ್ನಿ' ಎಂದು ಕರೆಯುವ ಮೂಲಕ ಅವರಿಗೆ 'ಅವಮಾನ' ಮಾಡಲಾಗಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ರಾಷ್ಟ್ರಪತ್ನಿ ಎಂದು ಕರೆದಿರುವ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತನಾಡಿ, ಈ ಪದವನ್ನು ಬಳಸುವುದರಿಂದ ದ್ರೌಪದಿ ಮುರ್ಮು ಮತ್ತು ಅವರ ಕಚೇರಿಯನ್ನು ಅವಮಾನಿಸುತ್ತದೆ. ಅಲ್ಲದೆ, ಭಾರತದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂಬುದನ್ನು ಚೌಧರಿ ಅವರು ಚೆನ್ನಾಗಿ ತಿಳಿದಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಕೂಡಲೇ ರಾಷ್ಟ್ರಪತಿ ಮುರ್ಮು ಮತ್ತು ಮತ್ತು ದೇಶದ ಕ್ಷಮೆಯಾಚಿಸಬೇಕು. 'ಇತಿಹಾಸ ಸೃಷ್ಟಿಸಿದ ಬಡ ಕುಟುಂಬದ ಬುಡಕಟ್ಟು ಮಹಿಳೆಯನ್ನು ಕಾಂಗ್ರೆಸ್ ನಿರಂತರವಾಗಿ ಅವಮಾನಿಸುತ್ತಿದೆ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಅಧೀರ್ ರಂಜನ್ ಚೌಧರಿ ಅವರು, ತಮ್ಮ ಪಕ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ರಾಷ್ಟ್ರಪತಿ ಎನ್ನುವ ಬದಲು ರಾಷ್ಟ್ರಪತ್ನಿ ಎಂದಿದ್ದರು.

'ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರನ್ನು ಹೆಸರಿಸಿದಾಗಿನಿಂದಲೂ ಕಾಂಗ್ರೆಸ್, ಮುರ್ಮು ಅವರನ್ನು 'ದುರುದ್ದೇಶಪೂರ್ವಕವಾಗಿ' ಗುರಿಯಾಗಿಸಿಕೊಂಡಿದೆ. ಮತ್ತು ಕಾಂಗ್ರೆಸ್‌ನ ನಾಯಕರು ಅವರನ್ನು 'ಕೈಗೊಂಬೆ' ಮತ್ತು 'ರಬ್ಬರ್ ಸ್ಟಾಂಪ್' ಎಂದು ಕರೆದಿದ್ದರು' ಎಂದು ಆರೋಪಿಸಿದರು.

'ಆದರೆ, ಈಗ ಅವರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಆಯ್ಕೆಯಾದ ನಂತರವೂ ಈ ವಾಗ್ದಾಳಿಗಳು ನಿಲ್ಲುವಂತೆ ಕಾಣುತ್ತಿಲ್ಲ. ಚೌಧರಿಯವರ ಈ ಹೇಳಿಕೆಯು ಮುರ್ಮು ಅವರು ಪ್ರತಿನಿಧಿಸುವ ಶ್ರೀಮಂತ ಬುಡಕಟ್ಟು ಪರಂಪರೆಗೆ ಮತ್ತು ಕಠಿಣ ಪರಿಶ್ರಮದ ಮೂಲಕ ಮೇಲೆ ಬರುವ ಬಡವರಿಗೆ ಮಾಡುವ ಅವಮಾನವಾಗಿದೆ' ಎಂದು ಹೇಳಿದರು.

ರಾಷ್ಟ್ರಪತಿಯನ್ನು ಹಿಂದಿಯಲ್ಲಿ "ರಾಷ್ಟ್ರಪತಿ" ಎಂದು ಕರೆಯಲಾಗುತ್ತದೆ. ರಾಷ್ಟ್ರಪತ್ನಿ ಎನ್ನುವುದು ಬೇರೆಯ ಅರ್ಥವನ್ನು ಸೂಚಿಸುತ್ತದೆ.

ಭಾರತದ ಮೊದಲ ಬುಡಕಟ್ಟು ಜನಾಂಗದಿಂದ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರು ಹೋರಾಟಗಳನ್ನು ನಡೆಸಿಕೊಂಡು ಬಂದಂತವರು. ಮತ್ತು ಪಂಚಾಯತ್‌ನಿಂದ ಸಂಸತ್ತಿನವರೆಗೆ ದೇಶದ ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತಾರೆ. ಅಧ್ಯಕ್ಷೆ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪದೇ ಪದೆ ಮಹಿಳೆಯರನ್ನು ಗುರಿಯಾಗಿಸಿಕೊಂಡಿದೆ ಇರಾನಿ ಆರೋಪಿಸಿದರು.

ಇದಲ್ಲದೆ ಸದನದ ಒಳಗೂ ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡ ಇರಾನಿ, ಸೋನಿಯಾ ಗಾಂಧಿ ಅವರೇ, ನೀವು ದ್ರೌಪದಿ ಮುರ್ಮು ಅವರ ಅವಮಾನವನ್ನು ಅನುಮೋದಿಸಿರುವಿರಿ. ಅತ್ಯುನ್ನತ ಸಾಂವಿಧಾನಿಕ ಹುದ್ದೆಯಲ್ಲಿ ಮಹಿಳೆಯನ್ನು ಅವಮಾನಿಸಲು ಸೋನಿಯಾ ಜಿ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

ಈ ವೇಳೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸದನದಲ್ಲಿ ಹಾಜರಿದ್ದರು. ಇದೇ ವಿಚಾರವಾಗಿ ಗದ್ದಲ ಉಂಟಾಯಿತು. ಬಳಿಕ ಸದನವನ್ನು ಮುಂದೂಡಲಾಯಿತು. ಲೋಕಸಭೆ ಮತ್ತು ರಾಜ್ಯಸಭೆಗಳೆರಡನ್ನೂ ಮಧ್ಯಾಹ್ನ 12 ಗಂಟೆಗೆ ಮುಂದೂಡಲಾಯಿತು.

ಇದಕ್ಕೂ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ಮಹಿಳಾ ಸಂಸದರು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅಧ್ಯಕ್ಷೆ ದ್ರೌಪದಿ ಮುರ್ಮು ಅವರ 'ರಾಷ್ಟ್ರಪತ್ನಿ' ಹೇಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಪಕ್ಷವು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಒಂದು ರಾಷ್ಟ್ರವಾಗಿ ಈ ಅವಮಾನವನ್ನು ನಾವು ಸಹಿಸುವುದಿಲ್ಲ. ಮಹಿಳೆಯರಾಗಿ ಕೂಡ ನಾವು ಇದನ್ನು ಸಹಿಸುವುದಿಲ್ಲ. ಬುಡಕಟ್ಟು ಜನಾಂಗದ ಮಹಿಳೆ ರಾಷ್ಟ್ರಪತಿಯಾಗಿರುವುದನ್ನು ಸಹಿಸಗ ಅವರಿಗೆ ನಾಚಿಕೆಯಾಗಬೇಕು. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದೆ ರಮಾದೇವಿ ಆಗ್ರಹಿಸಿದರು.

ಇದಲ್ಲದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಯನ್ನು ಖಂಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com