PTI
ನವದೆಹಲಿ: ಸಂಜಯ್ ರಾವುತ್ ಗುರುವಾರ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನ ಭೇಟಿಯಾಗಿ, ಏನನಾಥ್ ಶಿಂಧೆ ಬಣಕ್ಕೆ ಸೇರ್ಪಡೆಯಾಗಿರುವ ನಮ್ಮ ಪಕ್ಷದ 12 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ಕೋರಿದ್ದಾರೆ.
'ಶಿವಸೇನೆಯ 12 ಬಂಡಾಯ ಸಂಸದರನ್ನು ಅನರ್ಹಗೊಳಿಸುವಂತೆ ನಾನು ಕೇಳಿದ್ದೇನೆ' ಎಂದು ಸ್ಪೀಕರ್ ಜೊತೆಗಿನ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
2019ರ ಚುನಾವಣೆಯ ಬಳಿಕ ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ವಿನಾಯಕ್ ರಾವುತ್ ಅವರನ್ನು ಲೋಕಸಭೆಯ ಪಕ್ಷದ ನಾಯಕರನ್ನಾಗಿ ನೇಮಿಸಿದ್ದರು. ಸಂಜಯ್ ರಾವುತ್ ಅವರು ಮೇಲ್ಮನೆಯ ನಾಯಕರಾಗಿ ಆಯ್ಕೆಯಾಗಿದ್ದರು.
ಎರಡು ವಾರಗಳ ಹಿಂದೆ ಶಿವಸೇನೆಯ (ಉದ್ಧವ್ ಬಣ) 12 ಸಂಸದರು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಬಣಕ್ಕೆ ಸೇರ್ಪಡೆಯಾಗಿದ್ದರು. ಶಿಂದೆ ನೇತೃತ್ವದ 40 ಮಂದಿ ಶಿವಸೇನೆ ಶಾಸಕರು ‘ಮಹಾ ವಿಕಾಸ್ ಅಘಾಡಿ’ ನೇತೃತ್ವದ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರು. ನಂತರ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದರು.
ಇದನ್ನೂ ಓದಿ: ಮತ ಕೇಳಲು ನಿಮ್ಮ ತಂದೆಯ ಫೋಟೊ ಬಳಸಿ: ಏಕನಾಥ್ ಶಿಂಧೆಗೆ ಉದ್ಧವ್ ಠಾಕ್ರೆ ಸವಾಲು
ಶಿಂಧೆ ಬಣಕ್ಕೆ ಸೇರ್ಪಡೆಯಾಗಿದ್ದ 12 ಶಿವಸೇನೆಯ ಸಂಸದರು, ರಾಹುಲ್ ಶೆವಾಲೆ ಅವರನ್ನು ಪಕ್ಷದ ನಾಯಕರನ್ನಾಗಿ ಘೋಷಿಸಿದ್ದರು. ಸದನದ ನಾಯಕರಾಗಿದ್ದ ವಿನಾಯಕ್ ರಾವುತ್ ಅವರ ಬದಲಿಗೆ ಶೆವಾಲೆ ಅವರೇ ನಮ್ಮ ನಾಯಕರು ಎಂದು ಹೇಳಿದ್ದರು. ಅಲ್ಲದೆ, ಐದು ಬಾರಿ ಸಂಸದರಾಗಿದ್ದ ಭಾವನಾ ಗಾವ್ಲಿ ಅವರನ್ನೇ ಪಕ್ಷದ ಮುಖ್ಯ ವಿಪ್ ಎಂದು ಹೇಳಿದ್ದರು.
ಸ್ಪೀಕರ್ ಕೂಡ ಶೆವಾಲೆ ಅವರನ್ನೇ ಲೋಕಸಭೆಯ ಶಿವಸೇನೆ ನಾಯಕ ಎಂದು ಗುರುತಿಸಿದ್ದರು.