'ನಾವು ಯಾವುದೇ ತಪ್ಪು ಮಾಡಿಲ್ಲ': ಕ್ಷಮೆಯಾಚಿಸಲು ನಿರಾಕರಿಸಿದ ಅಮಾನತುಗೊಂಡ ಪ್ರತಿಪಕ್ಷ ಸಂಸದರು
ಅಶಿಸ್ತಿನ ನಡವಳಿಕೆ ಮತ್ತು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದರು ಎನ್ನುವ ಆರೋಪದ ಮೇಲೆ ಅಮಾನತುಗೊಂಡಿರುವ ವಿರೋಧ ಪಕ್ಷಗಳ 24 ಸದಸ್ಯರು ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಅಮಾನತು ಆದೇಶ ಹಿಂಪಡೆಯಲು ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿದ್ದಾರೆ.
Published: 28th July 2022 01:01 PM | Last Updated: 28th July 2022 01:34 PM | A+A A-

ಸಂಸತ್ತಿನ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಕೈಗೊಂಡಿರುವ ಅಮಾನತುಗೊಂಡ ಸಂಸದರು
ನವದೆಹಲಿ: ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಅಮಾನತು ಹಿಂಪಡೆಯಲು ಕ್ಷಮೆಯಾಚಿಸುವುದಿಲ್ಲ ಎಂದು ರಾಜ್ಯಸಭೆಯಿಂದ ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದರು ಗುರುವಾರ ಹೇಳಿದ್ದಾರೆ.
'ನಾವು ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಕ್ಷಮೆ ಕೇಳುವುದಿಲ್ಲ. ನಾವು ಈ ದೇಶದ ಸಾಮಾನ್ಯ ಜನರ ಸಮಸ್ಯೆಯನ್ನು ಎತ್ತಿದ್ದೇವೆ. ದೇಶವು ಬೆಲೆ ಏರಿಕೆಯಿಂದ ಬಳಲುತ್ತಿದೆ. ಹೀಗಾಗಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಲಿ ಎನ್ನುವುದು ತಪ್ಪಲ್ಲ' ಎಂದು ಟಿಎಂಸಿ ಸಂಸದೆ ಶಾಂತಾ ಛೆಟ್ರಿ ಹೇಳಿದರು.
ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಮತ್ತೋರ್ವ ಸಂಸದ ಮೌಸಮ್ ನೂರ್ ಕೂಡ ಇದೇ ಮಾತನ್ನು ಹೇಳಿದ್ದಾರೆ. 'ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾವು ಸಂಸತ್ತಿನಲ್ಲಿ ಬೆಲೆ ಏರಿಕೆಯ ಬಗ್ಗೆ ಚರ್ಚೆ ನಡೆಸಲು ಬಯಸುತ್ತೇವೆ. ಆದರೆ, ನಮ್ಮನ್ನು ಅಮಾನತುಗೊಳಿಸಲಾಗಿದೆ. ನಮ್ಮ 50 ಗಂಟೆಗಳ ಸುದೀರ್ಘ ಪ್ರತಿಭಟನೆಯು ಸದನದ ಹೊರಗೆ ಮುಂದುವರಿಯುತ್ತದೆ' ಎಂದು ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.
ಬುಧವಾರವಷ್ಟೇ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು, ಅಮಾನತುಗೊಂಡಿರುವ ಸಂಸದರು ಕ್ಷಮೆಯಾಚಿಸಿದರೆ ಮತ್ತು ಸದನದಲ್ಲಿ ಫಲಕಗಳನ್ನು ಪ್ರದರ್ಶಿಸುವುದಿಲ್ಲ ಎಂದು ಭರವಸೆ ನೀಡಿದರೆ ಮಾತ್ರ ಅವರ ಅಮಾನತನ್ನು ಸಭಾಪತಿ ಹಿಂಪಡೆಯಲು ಪರಿಗಣಿಸಬಹುದು ಎಂದು ಹೇಳಿದ್ದರು.
ಇದನ್ನೂ ಓದಿ: ವಿಷಾದ ವ್ಯಕ್ತಪಡಿಸಿದರೆ ಮಾತ್ರ ಅಮಾನತು ಆದೇಶ ಹಿಂಪಡೆಯುವಿಕೆ ಪರಿಗಣನೆ: ವೆಂಕಯ್ಯ ನಾಯ್ಡು
ರಾಜ್ಯಸಭೆಯ 20 ಮತ್ತು ಲೋಕಸಭೆಯ ನಾಲ್ವರು ಸೇರಿದಂತೆ ಪ್ರತಿಪಕ್ಷಗಳ ಒಟ್ಟು 24 ಸಂಸದರು ತಮ್ಮ ಅಶಿಸ್ತಿನ ವರ್ತನೆ ಮತ್ತು ಸಂಸತ್ತಿನಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಅಮಾನತುಗೊಂಡಿದ್ದಾರೆ. ಈ ಕ್ರಮವನ್ನು ವಿರೋಧಿಸಿ, ಅಮಾನತುಗೊಂಡಿರುವ 20 ರಾಜ್ಯಸಭೆಯ ಸದಸ್ಯರು ಬುಧವಾರ ಸಂಸತ್ತಿನ ಸಂಕೀರ್ಣದೊಳಗಿನ ಗಾಂಧಿ ಪ್ರತಿಮೆ ಬಳಿ 50 ಗಂಟೆಗಳ ಕಾಲ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಅಮಾನತುಗೊಂಡಿರುವ 20 ಸಂಸದರಲ್ಲಿ ಟಿಎಂಸಿಯ 7, ಡಿಎಂಕೆಯ 6, ತೆಲಂಗಾಣ ರಾಷ್ಟ್ರ ಸಮಿತಿಯ 3, ಸಿಪಿಐ(ಎಂ) ಪಕ್ಷದ 2, ಸಿಪಿಐ ಮತ್ತು ಆಮ್ ಆದ್ಮಿ ಪಕ್ಷದ ತಲಾ ಒಬ್ಬರು ಸೇರಿದ್ದಾರೆ.
ಬೆಲೆ ಏರಿಕೆ ವಿರುದ್ಧ ದನಿ ಎತ್ತಿದ ಸದಸ್ಯರ ಅಮಾನತು ಹಿಂಪಡೆಯುವಂತೆ ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭಾ ಸಭಾಪತಿಗಳಿಗೆ ವಿಪಕ್ಷಗಳು ಮನವಿ ಸಲ್ಲಿಸಲಿವೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.