ಸ್ಮೃತಿ ಇರಾನಿ ಪುತ್ರಿ ವಿರುದ್ಧ ಅಕ್ರಮ ಬಾರ್ ಆರೋಪ: ಟ್ವೀಟ್ ಅಳಿಸುವಂತೆ ದೆಹಲಿ ಹೈಕೋರ್ಟ್ ಸೂಚನೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ 18 ವರ್ಷದ ಮಗಳು ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ಮೂವರು ಕಾಂಗ್ರೆಸ್ ನಾಯಕರಿಗೆ ದೆಹಲಿ ಹೈಕೋರ್ಟ್ ಇಂದು ಸಮನ್ಸ್ ಜಾರಿ ಮಾಡಿದೆ. ಜೊತೆಗೆ ತಾವು ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ  ಒಳಗೆ ಅಳಿಸುವಂತೆ ಸೂಚಿಸಿದೆ.
ಸ್ಮೃತಿ ಇರಾನಿ
ಸ್ಮೃತಿ ಇರಾನಿ

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಯ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ, ಸ್ಮೃತಿ ಇರಾನಿ ಮತ್ತು ಅವರ ಮಗಳ ವಿರುದ್ಧ ಮಾಡಿರುವ ಆರೋಪಗಳ ಕುರಿತು ಮಾಡಿರುವ ಟ್ವೀಟ್‌ಗಳನ್ನು 24 ಗಂಟೆಗಳ ಒಳಗೆ ಅಳಿಸಿಹಾಕಲು ಮೂವರು ಕಾಂಗ್ರೆಸ್ ನಾಯಕರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಹೇಳಿದೆ. ಅಲ್ಲದೆ, ಮೂವರಿಗೂ ಸಮನ್ಸ್ ಜಾರಿ ಮಾಡಿದೆ.

ಸ್ಮೃತಿ ಇರಾನಿ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ವಿರೋಧ ಪಕ್ಷದ ಪವನ್ ಖೇರಾ, ಜೈರಾಮ್ ರಮೇಶ್ ಮತ್ತು ನೆಟ್ಟಾ ಡಿಸೋಜಾ ಅವರು ತಾವು ಮಾಡಿರುವ ಟ್ವೀಟ್‌ಗಳನ್ನು ಅಳಿಸಿ ಆಗಸ್ಟ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಒಂದು ವೇಳೆ ಈ ಮೂವರು ನಾಯಕರು ಟ್ವೀಟ್‌ಗಳನ್ನು ಅಳಿಸಿಹಾಕುವಲ್ಲಿ ವಿಫಲರಾದರೆ, ಸಾಮಾಜಿಕ ಮಾಧ್ಯಮ ಕಂಪನಿ ಅಥವಾ ಟ್ವಿಟರ್ ಸ್ವತಃ ಟ್ವೀಟ್‌ಗಳನ್ನು ತೆಗೆಯಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಕೋರ್ಟ್ ಆದೇಶದ ನಂತರ ಟ್ವೀಟ್ ಮಾಡಿರುವ ಜೈರಾಮ್ ರಮೇಶ್, 'ಸ್ಮೃತಿ ಇರಾನಿ ಅವರು ದಾಖಲಿಸಿರುವ ಮಾನನಷ್ಟ ಪ್ರಕರಣಕ್ಕೆ ಔಪಚಾರಿಕವಾಗಿ ಉತ್ತರಿಸುವಂತೆ ದೆಹಲಿ ಹೈಕೋರ್ಟ್ ನಮಗೆ ನೋಟಿಸ್ ನೀಡಿದೆ. ನ್ಯಾಯಾಲಯದ ಮುಂದೆ ಸತ್ಯವನ್ನು ಪ್ರಸ್ತುತಪಡಿಸಲು ನಾವು ಎದುರು ನೋಡುತ್ತಿದ್ದೇವೆ. ಇರಾನಿ ಅವರು ಹೊರಹಾಕುತ್ತಿರುವ ಹೇಳಿಕೆಯನ್ನು ನಾವು ಪ್ರಶ್ನಿಸುತ್ತೇವೆ ಮತ್ತು ನಿರಾಕರಿಸುತ್ತೇವೆ' ಎಂದಿದ್ದಾರೆ.

ಸ್ಮೃತಿ ಇರಾನಿ ಅವರ 18 ವರ್ಷದ ಮಗಳು ಗೋವಾದಲ್ಲಿ 'ಅಕ್ರಮವಾಗಿ ಬಾರ್'ಅನ್ನು ನಡೆಸುತ್ತಿದ್ದಾಳೆ ಎಂಬ ಆರೋಪದ ಮೂಲಕ ಕಾಂಗ್ರೆಸ್ ನಾಯಕರು ಇರಾನಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಳೆದ ವಾರವಷ್ಟೇ ಮೂವರು ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷಕ್ಕೆ ಇರಾನಿ ಅವರು ಲೀಗಲ್ ನೋಟಿಸ್ ಕಳುಹಿಸಿದ್ದರು. ನೋಟಿಸ್‌ನಲ್ಲಿ ಮೂವರು ನಾಯಕರು ಲಿಖಿತವಾಗಿ ಬೇಷರತ್ ಕ್ಷಮೆಯಾಚಿಸಲು ಮತ್ತು ತಮ್ಮ ಮಗಳ ಮೇಲಿನ ಆರೋಪಗಳನ್ನು ತಕ್ಷಣವೇ ಹಿಂಪಡೆಯಲು ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com