'ಕ್ರೀಡೆಯಲ್ಲಿ ಸೋತವರಿಲ್ಲ, ಗೆದ್ದವರು ಮತ್ತು ಭವಿಷ್ಯದಲ್ಲಿ ಗೆಲ್ಲುವವರಿರುತ್ತಾರೆ': ಚೆನ್ನೈನಲ್ಲಿ 44 ನೇ ಚೆಸ್ ಒಲಿಂಪಿಯಾಡ್ ಉದ್ಘಾಟಿಸಿದ ಪಿಎಂ ಮೋದಿ

ಕ್ರೀಡೆಯಲ್ಲಿ ಸೋತವರು ಎಂಬುದಿಲ್ಲ, ಗೆದ್ದವರು ಮತ್ತು ಭವಿಷ್ಯದಲ್ಲಿ ಗೆಲ್ಲುವವರು ಎಂಬುದಷ್ಟೇ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಎಂ ನರೇಂದ್ರ ಮೋದಿ
ಪಿಎಂ ನರೇಂದ್ರ ಮೋದಿ

ಚೆನ್ನೈ: ಕ್ರೀಡೆಯಲ್ಲಿ ಸೋತವರು ಎಂಬುದಿಲ್ಲ, ಗೆದ್ದವರು ಮತ್ತು ಭವಿಷ್ಯದಲ್ಲಿ ಗೆಲ್ಲುವವರು ಎಂಬುದಷ್ಟೇ ಇರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ನಿನ್ನೆ ಚೆನ್ನೈಯಲ್ಲಿ FIDE 44 ನೇ ಚೆಸ್ ಒಲಿಂಪಿಯಾಡ್ ನ್ನು ಉದ್ಘಾಟಿಸಿ ಮಾತನಾಡಿದರು. ಚೆಸ್ ಒಲಿಂಪಿಯಾಡ್ ನ್ನು ಭಾರತವು ತನ್ನ ಇತಿಹಾಸದಲ್ಲಿ ವಿಶೇಷ ಸಮಯದಲ್ಲಿ ಆಯೋಜಿಸಿದೆ, ಇದು ವಸಾಹತುಶಾಹಿ ಆಳ್ವಿಕೆಯಿಂದ ಭಾರತ ಬಂಧ ಮುಕ್ತವಾಗಿ ಸ್ವತಂತ್ರ ಪಡೆದು ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಆಗಿರುವುದು ವಿಶೇಷ ಎಂದರು. 

ನಿನ್ನೆ ಚೆನ್ನೈಯ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ FIDE 44 ನೇ ಚೆಸ್ ಒಲಿಂಪಿಯಾಡ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಇಂತಹ ವಿಶೇಷ ಸಮಯದಲ್ಲಿ ಭಾರತ ಅಂತರಾಷ್ಟ್ರೀಯ ಚೆಸ್ ಆಟಗಾರರನ್ನು ಹೊಂದಿರುವುದು ಗೌರವವಾಗಿದೆ. ಕ್ರೀಡೆಯಲ್ಲಿ ಸೋತವರಿಲ್ಲ, ಗೆದ್ದವರಿದ್ದಾರೆ ಮತ್ತು ಭವಿಷ್ಯದಲ್ಲಿ ಗೆಲ್ಲುವವರಿರುತ್ತಾರೆ ಎಂದರು. 

ತಮ್ಮ ಮಾತನ್ನು ತಮಿಳಿನಲ್ಲಿ ವಣಕ್ಕಂ ಎನ್ನುವ ಮೂಲಕ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಕಡಿಮೆ ಅವಧಿಯಲ್ಲಿ ಸಂಘಟಕರು ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಕೇಂದ್ರದ ಸಂಪೂರ್ಣ ಬೆಂಬಲದೊಂದಿಗೆ ತಮಿಳುನಾಡು ಸರ್ಕಾರ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ಚೆಸ್ ಪಂದ್ಯದ ಆತಿಥ್ಯ ವಹಿಸುತ್ತಿರುವ ಕುರಿತು ಮಾತನಾಡಿದ ಮೋದಿ, ಭಾರತೀಯರು ಆತಿಥ್ಯದಲ್ಲಿ ಎತ್ತಿದ ಕೈ. ದೇಶ-ವಿದೇಶಗಳಿಂದ ಬರುವವರಿಗೆ ಇಲ್ಲಿ ಅತ್ಯುತ್ತಮ ಆತಿಥ್ಯ ನೀಡಲಾಗುತ್ತದೆ. 'ಅತಿಥಿ ದೇವೋ ಭವ' ಎಂಬ ಘೋಷವಾಕ್ಯವನ್ನು ನಾವು ಪಾಲಿಸುವವರು ಎಂದು ಪ್ರಧಾನಿ ಉಲ್ಲೇಖಿಸಿದರು. ಅಲ್ಲದೆ, ಆತಿಥ್ಯದ ಮಹತ್ವದ ಕುರಿತು ತಮಿಳು ಸಂತ ಕವಿ ತಿರುವಳ್ಳುವರ್ ಅವರ ದ್ವಿಪದಿಯನ್ನು ಉಲ್ಲೇಖಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, ಕೇಂದ್ರ ಸಚಿವರಾದ ಅನುರಾಗ್ ಠಾಕೂರ್ ಮತ್ತು ಎಲ್ ಮುರುಗನ್ ಇತರರು ಉಪಸ್ಥಿತರಿದ್ದರು. ಚೆನ್ನೈಯಿಂದ ಸುಮಾರು 50 ಕಿಮೀ ದೂರದಲ್ಲಿರುವ ಮಾಮಲ್ಲಪುರಂನಲ್ಲಿ ಕ್ರೀಡಾಕೂಟ ನಡೆಯುತ್ತಿದೆ. 

ಈ ವರ್ಷ ಒಲಂಪಿಯಾಡ್ ಉಕ್ರೇನ್ ನಲ್ಲಿ ನಡೆಯಬೇಕಾಗಿತ್ತು. ಆದರೆ ರಷ್ಯಾ ದಾಳಿಯಿಂದಾಗಿ ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಮುಕ್ತ ಪಂದ್ಯ ವಿಭಾಗದಲ್ಲಿ 188 ಮತ್ತು ಮಹಿಳೆಯರ ವಿಭಾಗದಲ್ಲಿ 162 ಕ್ರೀಡಾಳುಗಳು ಸ್ಪರ್ಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com