ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ; ಯಾವುದೇ ಕಾರಣಕ್ಕೂ ಶಿವಸೇನೆ ತೊರೆಯುವುದಿಲ್ಲ: ಸಂಜಯ್ ರಾವುತ್
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ತಂಡವು ಮುಂಬೈನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿರುವ ಬೆನ್ನಲ್ಲೇ, ರಾವುತ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Published: 31st July 2022 11:19 AM | Last Updated: 31st July 2022 11:19 AM | A+A A-

ಸಂಜಯ್ ರಾವುತ್
ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ತಂಡವು ಮುಂಬೈನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನಿವಾಸದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿರುವ ಬೆನ್ನಲ್ಲೇ, ರಾವುತ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. 'ಮಹಾರಾಷ್ಟ್ರ ಮತ್ತು ಶಿವಸೇನೆಯು ಹೋರಾಟವನ್ನು ಮುಂದುವರೆಸುತ್ತದೆ' ಎಂದು ಹೇಳಿದ ಅವರು, ಈ ಆರೋಪವನ್ನು ತಳ್ಳಿಹಾಕಿದರು.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 'ನನ್ನ ವಿರುದ್ದ ಸುಳ್ಳು ಕ್ರಮ, ಸುಳ್ಳು ಸಾಕ್ಷ್ಯ ನೀಡಿದರೂ ಕೂಡ, ನಾನು ಶಿವಸೇನೆಯನ್ನು ತೊರೆಯುವುದಿಲ್ಲ. ನಾನು ಸತ್ತರೂ ಕೂಡ ಶರಣಾಗುವುದಿಲ್ಲ. ಜೈ ಮಹಾರಾಷ್ಟ್ರ' ಎಂದಿದ್ದಾರೆ.
'ಯಾವುದೇ ಹಗರಣಕ್ಕೂ ನನಗೂ ಸಂಬಂಧವಿಲ್ಲ. ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಮೇಲೆ ಪ್ರಮಾಣ ಮಾಡುವ ಮೂಲಕ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಬಾಳಾಸಾಹೇಬರು ನಮಗೆ ಹೇಗೆ ಹೋರಾಡಬೇಕೆಂದು ಕಲಿಸಿದರು. ನಾನು ಶಿವಸೇನೆಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹಣ ಅಕ್ರಮ ವರ್ಗಾವಣೆ: ಶಿವಸೇನಾ ಸಂಸದ ಸಂಜಯ್ ರಾವುತ್ ನಿವಾಸದಲ್ಲಿ ಇ.ಡಿ ಅಧಿಕಾರಿಗಳ ಶೋಧ
ಮತ್ತೊಂದು ಟ್ವೀಟ್‌ನಲ್ಲಿ, 'ಶಿವಸೇನೆ ದೀರ್ಘಕಾಲ ಗೆಲ್ಲುತ್ತದೆ!!! ಹೋರಾಟ ಯಾವಾಗಲೂ ಇರುತ್ತದೆ..' ಎಂದು ಬರೆದಿದ್ದಾರೆ.
ಜಾರಿ ನಿರ್ದೇಶನಾಲಯದ (ಇ.ಡಿ) ತಂಡವು ಭಾನುವಾರ ಬೆಳಗ್ಗೆ ಮುಂಬೈನಲ್ಲಿರುವ ಶಿವಸೇನಾ ಸಂಸದ ಸಂಜಯ್ ರಾವುತ್ ಅವರ ನಿವಾಸದಲ್ಲಿ ಶೋಧ ಕಾರ್ಯ ಕೈಗೊಂಡಿದೆ. ಮುಂಬೈನ 'ಪತ್ರಾ ಚಾಲ್' ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ರಾವುತ್ ಅವರನ್ನು ಇ.ಡಿ ತನಿಖೆ ನಡೆಸುತ್ತಿದೆ.
ಈಮಧ್ಯೆ, ರಾವುತ್ ಅವರ ಬೆಂಬಲಿಗರು ಅವರ ನಿವಾಸದ ಹೊರಗೆ ಜಮಾಯಿಸಿ, ಇ.ಡಿ ಮತ್ತು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು.