ಪ್ರವಾದಿ ಕುರಿತ ಹೇಳಿಕೆ ವಿವಾದ: ಉತ್ತರ ಪ್ರದೇಶದಲ್ಲಿ 227 ಮಂದಿ ಪ್ರತಿಭಟನಾಕಾರರ ಬಂಧನ

ಪ್ರವಾದಿ ಕುರಿತ ಹೇಳಿಕೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಈ ವರೆಗೂ 227 ಮಂದಿಯನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಬಂಧನ
ಉತ್ತರ ಪ್ರದೇಶದಲ್ಲಿ ಪ್ರತಿಭಟನಾಕಾರರ ಬಂಧನ

ಲಖನೌ: ಪ್ರವಾದಿ ಕುರಿತ ಹೇಳಿಕೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಈ ವರೆಗೂ 227 ಮಂದಿಯನ್ನು ಬಂಧಿಸಲಾಗಿದೆ.

ಶುಕ್ರವಾರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಿಂದ ಒಟ್ಟು 227 ಜನರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತರ ಪೈಕಿ 68 ಮಂದಿಯನ್ನು ಪ್ರಯಾಗ್‌ರಾಜ್‌ನಿಂದ ಮತ್ತು 50 ಜನರನ್ನು ಹತ್ರಾಸ್‌ನಿಂದ ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಳಿದವರ ಪೈಕಿ ಸಹರಾನ್‌ಪುರದಲ್ಲಿ 48, ಅಂಬೇಡ್ಕರ್‌ನಗರದಲ್ಲಿ 28, ಮೊರಾದಾಬಾದ್‌ನಲ್ಲಿ 25 ಮತ್ತು ಫಿರೋಜಾಬಾದ್‌ನಲ್ಲಿ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಪ್ರಯಾಗರಾಜ್ ಮತ್ತು ಸಹರಣ್ ಪುರದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ನಡೆದ ಪ್ರತಿಭಟನೆಯಲ್ಲಿ ಜನರು ಗದ್ದಲ ಎಬ್ಬಿಸಿದ್ದರಿಂದ ಜನರು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು. ಈಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ಆಕ್ಷೇಪಾರ್ಹ ಹೇಳಿಕೆಗಳನ್ನು ಖಂಡಿಸಲು ನಡೆಸಿದ ಮೆರವಣಿಗೆಗಳಲ್ಲಿ ಕನಿಷ್ಠ ನಾಲ್ಕು ಇತರ ನಗರಗಳು ಇದೇ ರೀತಿಯ ಪ್ರತಿಭಟನೆಗಳು ನಡೆದಿವೆ.

ಪ್ರಯಾಗ್‌ರಾಜ್‌ನಲ್ಲಿ ಪ್ರತಿಭಟನಾನಿರತರು ಬೈಕ್ ಗಳಿಗೆ ಮತ್ತು ಕಾರುಗಳಿಗೆ ಬೆಂಕಿ ಹಚ್ಚಿದ್ದು, ಪೊಲೀಸ್ ವಾಹನವನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಪ್ರತಿಭಟನಾ ನಿರತ ಗುಂಪುಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ಮಾಡಿದ್ದಾರೆ. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ಕಲ್ಲು ತೂರಾಟ ನಡೆದಿದ್ದು, ಮುಖ್ಯರಸ್ತೆಯಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ತಂಡದ ಮೇಲೆ ಕೆಲವು ಪ್ರತಿಭಟನಾಕಾರರು ಕಲ್ಲು ತೂರಿದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.  

ಸಹರಾನ್‌ಪುರದಲ್ಲಿ ಪ್ರತಿಭಟನಾಕಾರರು ಶರ್ಮಾ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ಅವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು. ಬಿಜ್ನೋರ್, ಮೊರಾದಾಬಾದ್, ರಾಂಪುರ ಮತ್ತು ಲಕ್ನೋದಲ್ಲಿ ಪ್ರತಿಭಟನೆಗಳು ನಡೆದವು. 

ಹೌರಾಗೆ ತೆರಳುತ್ತಿದ್ದ ಬಿಜೆಪಿ ನಾಯಕನಿಗೆ ತಡೆ
ಇದೇ ವೇಳೆ ಪಶ್ಚಿಮ ಬಂಗಾಳದಲ್ಲೂ ಹಿಂಸಾಚಾರ ನಡೆದಿದ್ದು, ಪ್ರಸ್ತುತ ಅಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಅವರನ್ನು ಶನಿವಾರ ಹೌರಾ ಜಿಲ್ಲೆಯಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡದಂತೆ ಪೊಲೀಸರು ತಡೆದರು. ಮಜುಂದಾರ್ ಅವರು ಹೌರಾ ಜಿಲ್ಲೆಗೆ ಹೊರಡಲು ತಯಾರಾಗುತ್ತಿದ್ದಂತೆ ಕೋಲ್ಕತ್ತಾದ ಈಶಾನ್ಯ ಅಂಚಿನಲ್ಲಿರುವ ನ್ಯೂ ಟೌನ್‌ನಲ್ಲಿರುವ ತಮ್ಮ ನಿವಾಸದ ಹೊರಗೆ ಪೊಲೀಸರು ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಅವರನ್ನು ತಡೆದರು. 

ಈ ಕುರಿತು ಮಾತನಾಡಿದ ಅವರು, 'ನಮ್ಮ ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಿದ್ದು, ಸುಟ್ಟುಹಾಕಿದ್ದಾರೆ. ಹೀಗಾಗಿ ಹೌರಾ ಜಿಲ್ಲೆಯ ಪ್ರದೇಶಗಳಿಗೆ ನಾನು ಭೇಟಿ ನೀಡಲು ನಿರ್ಧರಿಸಿದ್ದೆ. ನಾನು ಹೊರಡಲು ಸಿದ್ಧವಾಗುತ್ತಿದ್ದಂತೆ, ಪೊಲೀಸರು ನನ್ನ ನಿವಾಸದ ಹೊರಗೆ ಬ್ಯಾರಿಕೇಡ್‌ಗಳನ್ನು ಹಾಕಿದರು ಮತ್ತು ನನ್ನ ಮನೆಯಿಂದ ಹೊರಬರದಂತೆ ನನ್ನನ್ನು ತಡೆದರು" ಎಂದು ಮಜುಂದಾರ್ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದರು. "ಯಾವ ನಿಯಮದ ಅಡಿಯಲ್ಲಿ ನನ್ನನ್ನು ಹೌರಾಗೆ ಭೇಟಿ ನೀಡುವುದನ್ನು ತಡೆಯಲಾಗಿದೆ ಎಂದು ನಾನು ತಿಳಿದುಕೊಳ್ಳಲು ಬಯಸುತ್ತೇನೆ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com