ಅಗ್ನಿಪಥ ಯೋಜನೆ: ಅಗ್ನಿವೀರರಿಗೆ ಮೂರು ವರ್ಷಗಳ ಪದವಿ ಕೋರ್ಸ್- ಕೇಂದ್ರ ಶಿಕ್ಷಣ ಸಚಿವಾಲಯ

ಕೇಂದ್ರ ಸರ್ಕಾರ ನಿರುದ್ಯೋಗ ಹೋಗಲಾಡಿಸಲು 'ಅಗ್ನಿಪಥ' ಯೋಜನೆಯಡಿ 46 ಸಾವಿರ ಅಗ್ನಿವೀರರನ್ನು 2023ರ ಜುಲೈ ನಿಂದ ನೇಮಿಸಿಕೊಳ್ಳಲಿದೆ. ಇನ್ನು ಮೂರು ತಿಂಗಳಲ್ಲಿ ಈ ಹುದ್ದೆಗೆ ನೇಮಕ ಪ್ರಕ್ರಿಯೆ ಮುಗಿಸುವ ಉದ್ದೇಶ ಹೊಂದಿದೆ ಕೇಂದ್ರ ಸರ್ಕಾರ. ಅತ್ಯಾಕರ್ಷಕ ಸಂಬಳ, ಭತ್ಯೆ, ಸೌಲಭ್ಯಗಳ ಜತೆಗೆ ಪದವಿ ಕೋರ್ಸ್‌ ನೀಡುವುದಾಗಿ ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಕೇಂದ್ರ ಸರ್ಕಾರ ನಿರುದ್ಯೋಗ ಹೋಗಲಾಡಿಸಲು 'ಅಗ್ನಿಪಥ' ಯೋಜನೆಯಡಿ 46 ಸಾವಿರ ಅಗ್ನಿವೀರರನ್ನು 2023ರ ಜುಲೈ ನಿಂದ ನೇಮಿಸಿಕೊಳ್ಳಲಿದೆ. ಇನ್ನು ಮೂರು ತಿಂಗಳಲ್ಲಿ ಈ ಹುದ್ದೆಗೆ ನೇಮಕ ಪ್ರಕ್ರಿಯೆ ಮುಗಿಸುವ ಉದ್ದೇಶ ಹೊಂದಿದೆ ಕೇಂದ್ರ ಸರ್ಕಾರ. ಅತ್ಯಾಕರ್ಷಕ ಸಂಬಳ, ಭತ್ಯೆ, ಸೌಲಭ್ಯಗಳ ಜತೆಗೆ ಪದವಿ ಕೋರ್ಸ್‌ ನೀಡುವುದಾಗಿ ಘೋಷಣೆ ಮಾಡಿದೆ.

ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆ ಅಡಿಯಲ್ಲಿ ಸೇನೆಗೆ ಸೇರುವ ಅಗ್ನಿವೀರರಿಗೆ ಕೌಶಲ ಆಧಾರಿತ ಮೂರು ವರ್ಷಗಳ ವಿಶೇಷ ಪದವಿ ಕೋರ್ಸ್‌ ಅನ್ನು ಕೇಂದ್ರ ಶಿಕ್ಷಣ ಸಚಿವಾಲಯ ಆರಂಭಿಸಲಿದ್ದು, ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ ಈ ಪದವಿ ಕೋರ್ಸ್‌ ಅನ್ನು ಆರಂಭಿಸಲಿದ್ದು, ಇದಕ್ಕೆ ಭಾರತ ಮತ್ತು ವಿದೇಶಗಳಲ್ಲಿ ಮಾನ್ಯತೆ ದೊರೆಯಲಿದೆ. 

ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಈ ಕಾರ್ಯಕ್ರಮ ಜಾರಿಗೆ ಇಗ್ನೊ (IGNOU) ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಿವೆ. ಅಗ್ನಿವೀರರು ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್‌ನಲ್ಲಿ ಕ್ರೆಡಿಟ್‌ಗಳಾಗಿ ಗುರುತಿಸಲಾಗುತ್ತದೆ. ಈ ಮೂಲಕ ಅವರು ತಮ್ಮ ಭವಿಷ್ಯದಲ್ಲಿ ತಮಗಿಷ್ಟವಾದ ನಾಗರಿಕ ವೃತ್ತಿಜೀವನ ಆಯ್ಕೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ಹೌದು, 4 ವರ್ಷದ ಅವಧಿಗೆ ಸೇನೆಗೆ ಸೇರುವ ಅಗ್ನಿಪಥ'ದ ಅಗ್ನಿವೀರರಿಗೆ ಉದ್ಯೋಗ, ಸಂಬಳದ ಜತೆಗೆ ಮೂರು ವರ್ಷಗಳ ಕೌಶಲ ಆಧರಿತ ವಿಶೇಷ ಪದವಿ ಕೋರ್ಸ್‌ ಆರಂಭಿಸಲಿದೆ ಶಿಕ್ಷಣ ಸಚಿವಾಲಯ. ಹುದ್ದೆಯ ಕರ್ತವ್ಯ ನಿರ್ವಹಣೆ ಜತೆಗೆಯೇ ಅಗ್ನಿವೀರರಿಗೆ ಡಿಗ್ರಿ ಪದವಿ ಸಿಗುವ ಸೌಲಭ್ಯ ಇದಾಗಿದೆ. ಈ ಮೂಲಕ 12ನೇ ತರಗತಿ ಆಧಾರದಲ್ಲಿ ಅಗ್ನಿವೀರ ಹುದ್ದೆಗೆ ಸೇರುವ ಅಭ್ಯರ್ಥಿಗಳು ಕೌಶಲ ಆಧರಿತ ಪದವಿ ಶಿಕ್ಷಣವನ್ನು ಸೇನಾ ಕರ್ತವ್ಯದ ಜತೆಗೆಯೇ ಪಡೆಯಬಹುದಾಗಿದೆ.

ಇದರಿಂದ ಡಿಗ್ರಿ ಪಡೆಯಲು ಮತ್ತೆ ಮೂರು ವರ್ಷ ಸಮಯ ನೀಡುವ ಅಗತ್ಯವು ಇಲ್ಲ. ಅಗ್ನಿವೀರರು ಪಡೆಯುವ ಸೇವಾ ತರಬೇತಿಯನ್ನು ಪದವಿ ಕೋರ್ಸ್‌ನಲ್ಲಿ ಕ್ರೆಡಿಟ್ ಗಳಾಗಿ ಗುರುತಿಸಲಾಗುತ್ತದೆ. ಪದವಿ ಕೋರ್ಸ್‌ಗೆ ಅಗತ್ಯವಿರುವ ಶೇಕಡ 50 ರಷ್ಟು 'ಕ್ರೆಡಿಟ್' ಅನ್ನು ಅಗ್ನಿವೀರರು ಕೌಶಲ ತರಬೇತಿ ಮೂಲಕ ಪಡೆಯುತ್ತಾರೆ. ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯ (IGNOU) ಈ ಕ್ರೆಡಿಟ್ ಆಧಾರಿತ ಪದವಿ ಕೋರ್ಸ್‌ ಆರಂಭಿಸಲಿದೆ. ಇದಕ್ಕಾಗಿ ಭೂಸೇನೆ, ವಾಯುಪಡೆ, ನೌಕಾಪಡೆಗಳು ಇಗ್ನೊದ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಗ್ನಿವೀರರಿಗೆ ಶೇಕಡ 50 ರಷ್ಟು ಕ್ರೆಡಿಟ್‌
ಅಗ್ನಿಪಥ'ದ ಅಗ್ನಿವೀರರಿಗೆ ಶೇಕಡ 50 ರಷ್ಟು ಕ್ರೆಡಿಟ್‌ಗಳು ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಗಣಿತ, ಶಿಕ್ಷಣ, ವಾಣಿಜ್ಯ, ಪ್ರವಾಸೋದ್ಯಮ, ಭಾಷೆಗಳು, ಅರ್ಥಶಾಸ್ತ್ರ, ಇತಿಹಾಸ, ರಾಜಕೀಯ, ವಿಜ್ಞಾನ, ವೃತ್ತಿಪರ ಅಧ್ಯಯನ, ಕೃಷಿ ಮತ್ತು ಜ್ಯೋತಿಷ್ಯ, ಪರಿಸರ ಅಧ್ಯಯನ ಹಾಗೂ ಇಂಗ್ಲಿಷ್ ಸಂವಹನ ಕೌಶಲದಿಂದ ದೊರೆಯಲಿದೆ. ಈ ಕೋರ್ಸ್‌ ಅನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಕ್ಕೆ ಅನುಗುಣವಾಗಿ ರೂಪಿಸಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗವು ರಾಷ್ಟ್ರೀಯ ಕ್ರೆಡಿಟ್ ಚೌಕಟ್ಟು / ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟಿನ (ಎನ್‌ಎಸ್‌ಕ್ಯೂಎಫ್‌) ಮಾನದಂಡಗಳೊಂದಿಗೆ ಸಂಯೋಜಿಸಲಾಗಿದೆ.

ಎನ್‌ಇಪಿ 2020 ಪ್ರಕಾರ ಈ ಪದವಿ ಕೋರ್ಸ್‌, ವಿದ್ಯಾರ್ಥಿಗಳಿಗೆ ಬಹು ಆಯ್ಕೆಯನ್ನು ನೀಡುತ್ತದೆ. ಅಂದರೆ ಒಂದು ವರ್ಷವನ್ನು ಯಶಸ್ವಿಯಾಗಿ ಓದಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಒಂದು ಮತ್ತು ಎರಡು ವರ್ಷದ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಡಿಪ್ಲೊಮ ಪ್ರಮಾಣ ಪತ್ರ, ಮೂರು ವರ್ಷದ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com