ಅಗ್ನಿಪಥ ಯೋಜನೆ ವಿರುದ್ಧ ಹಲವು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ: ರೈಲುಗಳಿಗೆ ಬೆಂಕಿ, ಪೊಲೀಸ್ ಗುಂಡಿಗೆ ಸಿಕಂದರಾಬಾದ್ ನಲ್ಲಿ ಓರ್ವ ಸಾವು
ಕೇಂದ್ರ ಸರ್ಕಾರದ ಹೊಸ ನೇಮಕಾತಿ ಯೋಜನೆ 'ಅಗ್ನಿಪಥ' ವಿರುದ್ಧ ಪ್ರತಿಭಟನೆ ಇದೀಗ ಹೈದರಾಬಾದ್‌ಗೆ ವ್ಯಾಪಿಸಿದೆ, ಪ್ರತಿಭಟನಾಕಾರರು ಶುಕ್ರವಾರ ಬೆಳಿಗ್ಗೆ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಕನಿಷ್ಠ ಏಳು ರೈಲುಗಳಿಗೆ ಬೆಂಕಿ ಹಚ್ಚಿ ಇಡೀ ರೈಲ್ವೆ ನಿಲ್ದಾಣದ ಆವರಣವನ್ನು ದೋಚಿದ್ದಾರೆ.
Published: 17th June 2022 01:27 PM | Last Updated: 17th June 2022 01:38 PM | A+A A-

ಪ್ರತಿಭಟನೆಯಲ್ಲಿ ಹೊತ್ತಿ ಉರಿದ ರೈಲು
ನವದೆಹಲಿ: ಸೇನಾ ನೇಮಕಾತಿ ಅಗ್ನಿಪಥ ಹೊಸ ಮಾದರಿ ಯೋಜನೆಯ(Agnipath scheme) ವಿರುದ್ಧ ದೇಶಾದ್ಯಂತ ಪ್ರತಿಭಟನೆ ತೀವ್ರವಾಗಿದೆ. ಕೇಂದ್ರ ಸರ್ಕಾರದ ಹೊಸ ನೇಮಕಾತಿ ಯೋಜನೆಯ ವಿರುದ್ಧ ಪ್ರತಿಭಟನೆ ಇದೀಗ ಹೈದರಾಬಾದ್‌ಗೆ ವ್ಯಾಪಿಸಿದೆ, ಪ್ರತಿಭಟನಾಕಾರರು ಶುಕ್ರವಾರ ಬೆಳಿಗ್ಗೆ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಕನಿಷ್ಠ ಏಳು ರೈಲುಗಳಿಗೆ ಬೆಂಕಿ ಹಚ್ಚಿ ಇಡೀ ರೈಲ್ವೆ ನಿಲ್ದಾಣದ ಆವರಣವನ್ನು ದೋಚಿದ್ದಾರೆ.
ಸಿಕಂದರಾಬಾದ್ ರೈಲ್ವೇ ನಿಲ್ದಾಣದಲ್ಲಿ ಅಗ್ನಿಪಥ್ ಪ್ರತಿಭಟನಾಕಾರರ ಮೇಲೆ ರೈಲ್ವೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಒಬ್ಬ ವ್ಯಕ್ತಿ ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಮೃತರನ್ನು ವಾರಂಗಲ್ ಜಿಲ್ಲೆಯ ದಾಮೋದರ್ ಎಂದು ಗುರುತಿಸಲಾಗಿದೆ. ರೈಲ್ವೇ ಸಂರಕ್ಷಣಾ ಪಡೆ ಮತ್ತು ತೆಲಂಗಾಣ ಪೊಲೀಸರಿಂದ ಹೆಚ್ಚುವರಿ ಪಡೆಗಳನ್ನು ರೈಲ್ವೇ ನಿಲ್ದಾಣಕ್ಕೆ ಕಳುಹಿಸಲಾಗಿದ್ದು, ಆದಾಗ್ಯೂ ಅಷ್ಟು ಹೊತ್ತಿಗಾಗಲೇ ಸಾಕಷ್ಟು ಹಾನಿ, ದುರಂತ ಸಂಭವಿಸಿದೆ. ಸಿಕಂದರಾಬಾದ್ ನಲ್ಲಿ ಸದ್ಯ ಪರಿಸ್ಥಿತಿ ಕೈಮೀರುತ್ತಿದೆ. ರೈಲು ಬೋಗಿಗಳು ಹೊತ್ತಿ ಉರಿದಿವೆ. ರೈಲು ಬೋಗಿಗಳು ಸುಟ್ಟು ಕರಕಲಾಗಿವೆ.
ಮತ್ತೊಂದೆಡೆ, ಬಿಹಾರದಲ್ಲಿ ಎರಡನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಬೇಗುಸರಾಯ್ ಜಿಲ್ಲೆಯಲ್ಲಿ ಉದ್ರಿಕ್ತ ಯುವಕರು ರಾಜಬಾರಾ ಗುಮ್ಟಿ ರಸ್ತೆಯನ್ನು ತಡೆದಿದ್ದಾರೆ. ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟಿಸುತ್ತಿದ್ದು ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ. ಹಲವೆಡೆ ರಸ್ತೆ ಸಂಚಾರವನ್ನೂ ನಿರ್ಬಂಧಿಸಲಾಗಿತ್ತು. ಪ್ರತಿಭಟನೆ ವೇಳೆ ರೈಲ್ವೇ ಹಳಿ ಮೇಲೆ ಟೈರ್ ಸುಟ್ಟು ಹಾಕಲಾಯಿತು. ಜಿಲ್ಲೆಯ ಸಾಹೇಬ್‌ಪುರ್‌ಕಮಲ್ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳು ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿ ಭಾರೀ ಗಲಾಟೆ ಸೃಷ್ಟಿಸಿದ್ದಾರೆ.
ಲಖಿಸರಾಯ್ ಜಿಲ್ಲೆಯು ಇದೇ ರೀತಿಯ ಕೋಲಾಹಲಕ್ಕೆ ಸಾಕ್ಷಿಯಾಯಿತು. ಕೇಂದ್ರ ಸರ್ಕಾರದ ಯೋಜನೆ ವಿರೋಧಿಸಿ ಜಿಲ್ಲೆಯಲ್ಲಿ ಪ್ರತಿಭಟನಾಕಾರರು ಜಂಟಿಯಾಗಿ ಮೆರವಣಿಗೆ ನಡೆಸಿದರು. ಪ್ರತಿಭಟನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಿದವು.
Protest against the Central government’s #AgnipathScheme turns violent as protestors set train bogies on fire at #Secunderabad Railway Station.
— The New Indian Express (@NewIndianXpress) June 17, 2022
Express video | @Vinaymadapu.#Agnipath pic.twitter.com/EbkjHXOcJG
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾದಲ್ಲಿ ಪ್ರಸ್ತುತ ಪಾಟ್ನಾದಲ್ಲಿರುವ ಉಪಮುಖ್ಯಮಂತ್ರಿ ರೇಣು ದೇವಿ ಅವರ ಮನೆ ಮೇಲೆ ದಾಳಿ ನಡೆದಿದೆ. ಲಖಿಸರಾಯ್ ಜಿಲ್ಲೆಯಲ್ಲಿಯೂ ಬಿಜೆಪಿ ಕಚೇರಿ ಮೇಲೆ ದಾಳಿ ನಡೆದಿದೆ.
ಉತ್ತರ ಪ್ರದೇಶದ ಬಲಿಯಾದಲ್ಲಿ ಇದೇ ರೀತಿಯ ಪ್ರತಿಭಟನೆ ನಡೆಯಿತು. ಅಗ್ನಿಪಥ್ ಯೋಜನೆ ವಿರೋಧಿಸಿ ಬಲ್ಲಿಯಾ ರೈಲು ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ಬೆಳಿಗ್ಗೆಯಿಂದಲೇ ನಿಲ್ದಾಣದಲ್ಲಿ ಪಡೆಗಳನ್ನು ನಿಯೋಜಿಸಲಾಗಿದೆ. ಕೆಲವು ಗೂಂಡಾಗಳು ಅಲ್ಲಿಗೆ ತಲುಪಿದ್ದರು. ಸಾರ್ವಜನಿಕ ಆಸ್ತಿಗೆ ಹೆಚ್ಚಿನ ಹಾನಿ ಮಾಡದಂತೆ ಅವರನ್ನು ತಡೆಯಲಾಯಿತು. ಕಲ್ಲು ತೂರಾಟಕ್ಕೆ ಯತ್ನಿಸಿದರು. ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಬಲ್ಲಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೌಮ್ಯ ಅಗರ್ವಾಲ್ ಹೇಳಿದ್ದಾರೆ.